ಆಂಧ್ರಪ್ರದೇಶದಲ್ಲಿ ಭಾರೀ ಫೇಮಸ್ ಆಗಿರುವ ಆನಂದಯ್ಯನ ಕೊರೊನಾ ಔಷಧಿ ಇದೀಗ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗೂ ಕಾಲಿಟ್ಟಿದೆ. ಬಳ್ಳಾರಿ, ಹಂಪಿ, ಕಮಲಾಪುರ, ಆನೆಗುಂದಿ ಸೇರಿದಂತೆ ಹಲವೆಡೆ ಆನಂದಯ್ಯರ ಕೊರೊನಾ ನಾಟಿ ಔಷಧಿಯನ್ನ ವಿತರಣೆ ಮಾಡಲಾಗ್ತಿದೆ.
ಹಂಪಿ ಸ್ವರ್ಣಾಶ್ರಮದ ಗೋವಿಂದಾನಂದ ಸರಸ್ವತಿ ಸ್ವಾಮೀಜಿಗಳು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ನಾಟಿವೈದ್ಯ ಆನಂದಯ್ಯ ಸಿದ್ಧಪಡಿಸಿರುವ ಈ ಕೊರೊನಾ ಔಷಧಿಯನ್ನ ವಿತರಣೆ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಈ ಔಷಧಿಯನ್ನ ಹಂಚಿಕೆ ಮಾಡಲು ಸರ್ಕಾರ ಅನುಮತಿ ನೀಡಬೇಕೆಂದು ಕೋರಿ ಸಿಎಂ ಯಡಿಯೂರಪ್ಪರಿಗೆ ಸ್ವತಃ ಗೋವಿಂದಾನಂದ ಸ್ವಾಮೀಜಿಗಳು ಪತ್ರ ಬರೆದಿದ್ದಾರೆ.
ಟ್ರಯಲ್ ರೂಪದಲ್ಲಿ ಗೋವಿಂದಾನಂದ ಸ್ವಾಮೀಜಿಗಳು 12 ಸಾವಿರ ಜನರಿಗೆ ಈ ಔಷಧಿಯನ್ನ ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಆಯುಷ್ ಇಲಾಖೆ ಈ ನಾಟಿ ಔಷಧಿಗೆ ಒಪ್ಪಿಗೆ ನೀಡಿದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಯಾವುದೇ ಅನುಮತಿಯನ್ನ ನೀಡಲಾಗಿಲ್ಲ.
ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಜನತೆಗೆ ಆನಂದಯ್ಯ ಕೊರೊನಾ ನಾಟಿ ಔಷಧಿಯನ್ನ ವಿತರಣೆ ಮಾಡ್ತಿರೋದಕ್ಕೆ ಅಡ್ಡಿಪಡಿಸಿದ ಆರೋಗ್ಯ ಇಲಾಖೆ ಈ ಔಷಧಿಗಳ ಹಂಚಿಕೆಗೆ ಬ್ರೇಕ್ ಹಾಕಿದೆ.
ಈ ಬಗ್ಗೆ ಮಾತನಾಡಿದ ಬಳ್ಳಾರಿ ಡಿಹೆಚ್ಓ ಜನಾರ್ದನ್, ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಈ ಔಷಧಿ ವಿತರಣೆ ಬೇಡ. ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಿಂದ ಈ ಔಷಧಿಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಆನಂದಯ್ಯ ಔಷಧಿ ವಿತರಣೆಯಾಗಕೂಡದು ಎಂದು ಎಚ್ಚರಿಕೆ ನೀಡಿದ್ದಾರೆ.