ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ನೈಜೀರಿಯಾ ದೇಶದ ಪ್ರಜೆಗಳ ಹಾವಳಿ ಜೋರಾಗಿದೆ. ಉದ್ಯಮದ ಹೆಸರಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನ ಎನ್ಡಿಎಂಎ ಡ್ರಗ್ ಮಾರಾಟ ಪ್ರಕರಣದಡಿಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನ ಪೌಲ್ ಒಹಮೋಬಿ ಅಲಿಯಾಸ್ ಇಫೆಚುಕು, ಉಚೆಕುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಟೀ ಶರ್ಟ್ ಎಕ್ಸ್ಪೋರ್ಟ್ ಉದ್ಯಮದ ಹೆಸರು ಹೇಳಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆದರೆ ಸೂಕ್ತ ತನಿಖೆ ನಡೆಸಿದ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಅವಿತಿದ್ದ ಆರೋಪಿಗಳನ್ನ ಖೆಡ್ಡಾಗೆ ಕೆಡುವವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಮಂಗಳೂರು ಹಾಗೂ ಕೇರಳ ಭಾಗದಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದಡಿಯಲ್ಲಿ ಈಗಾಗಲೇ 7 ಮಂದಿಯನ್ನ ಬಂಧಿಸಿದ್ದ ಪೊಲೀಸರು ಇದೀಗ ಇನ್ನಿಬ್ಬರನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 9 ಮಂದಿ ಬಂಧಿತರಲ್ಲಿ ಮೂವರು ನೈಜೀರಿಯಾ ಪ್ರಜೆಗಳು ಎಂದು ತಿಳಿದು ಬಂದಿದೆ. ಬಂಧಿತರಿಂದ 170 ಗ್ರಾಂ ಎಂಡಿಎಂಎ ನಿಷೇಧಿತ ಡ್ರಗ್ನ್ನು ವಶಕ್ಕೆ ಪಡೆದಿದ್ದಾರೆ.