ಜುಲೈ 19 ಮತ್ತು 22 ರಂದು 2020-21ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನೂತನ ಪರೀಕ್ಷಾ ಪದ್ಧತಿಯಂತೆ ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿಕೊಂಡು ನಡೆಸಲಾಗುತ್ತದೆ.
ಕಳೆದ ವರ್ಷ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸಿಕೊಡುವ ಮೂಲಕ ಕರ್ನಾಟಕ ರಾಜ್ಯ ದೇಶದ ಗಮನ ಸೆಳೆದಿತ್ತು. ಅದೇ ರೀತಿ ಈ ಬಾರಿಯೂ ಕೂಡ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ಬಾರಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿ ಯಶಸ್ವಿಗೊಳಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ನಡೆಸಬೇಕಾಗಿದೆ. ಯಾವೊಂದು ಮಗುವೂ ಪರೀಕ್ಷೆಯಿಂದ ವಂಚಿತವಾಗಬಾರದು. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷತಾ ಕೇಂದ್ರಗಳಾಗಬೇಕು. ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಯೆ ಕುಳಿತುಕೊಳ್ಳಬೇಕು. ಪರೀಕ್ಷೆ ನಡೆಯುವ ಎರಡು ದಿನಗಳಲ್ಲಿ ಪರೀಕ್ಷಾ ಪೂರ್ವ ಮತ್ತು ನಂತರ ಒಟ್ಟು ನಾಲ್ಕು ಬಾರಿ ಸೋಂಕು ನಿವಾರಕ ದ್ರಾವಣ(ಸ್ಯಾನಿಟೈಜರ್) ಸಿಂಪಡಣೆಯಾಗಬೇಕು. ಪರೀಕ್ಷಾ ಕಾರ್ಯದಲ್ಲಿ ತೊಡಗುವ ಶಿಕ್ಷಕರು, ಸಹಾಯಕ ಸಿಬ್ಬಂದಿಗಳು, ಎಲ್ಲರೂ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು.
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಆರೋಗ್ಯ ತಪಾಸಣಾ ಕೌಂಟರ್ ತೆರೆಯಬೇಕು. ಎಲ್ಲರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ ಮಾಡಬೇಕು. ರೋಗ ಲಕ್ಷಣಗಳಿದ್ದರೆ ಪಲ್ಸ್ ಆಕ್ಸಿಮೀಟರ್ ಮೂಲಕ ಪರೀಕ್ಷಿಸಬೇಕು. ರೋಗ ಲಕ್ಷಣ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿರಬೇಕು. ಯಾರಾದರೂ ಕೋವಿಡ್ ಸೋಂಕಿತ ವಿದ್ಯಾರ್ಥಿಗಳು ಇದ್ದಲ್ಲಿ ಅವರು ಪರೀಕ್ಷೆ ಬರೆಯುವ ಸ್ಥಿತಿಯಲ್ಲಿದ್ದು, ಪರೀಕ್ಷೆ ಬರೆಯಲು ಇಚ್ಛಿಸಿದರೆ ಕೋವಿಡ್ ಆರೈಕೆ ಕೇಂದ್ರ ದಲ್ಲಿ ವ್ಯವಸ್ಥೆ ಮಾಡಬೇಕು. ಆ ಉದ್ದೇಶಕ್ಕೆ ಪ್ರತಿ ತಾಲ್ಲೂಕಿಗೆ ಒಂದು ಆರೈಕೆ ಕೇಂದ್ರವನ್ನು ಮೀಸಲಿಟ್ಟುಕೊಂಡಿರಬೇಕು. ಪ್ರತಿ ತಾಲ್ಲೂಕಿಗೆ ಒಂದು ಆಂಬ್ಯಲೆನ್ಸ್ ನ್ನು ತುರ್ತು ಆರೋಗ್ಯ ಸೇವೆಯ ಉದ್ದೇಶಕ್ಕೆ ಮೀಸಲಿಟ್ಟುಕೊಂಡಿರಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ದಾಖಲು
ಪ್ರಶ್ನೆ ಪತ್ರಿಕೆಗಳು ತಮಗೆ ತಲುಪಿದ ಮೇಲೆ ಅವುಗಳನ್ನು ಸೂಕ್ತವಾಗಿ ಸರ್ಕಾರದ ನಿಯಮಾವಳಿ ರೀತ್ಯ ಭದ್ರತೆಯಲಿಟ್ಟು ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೌಪ್ಯತೆಗೆ ಧಕ್ಕೆಯಾಗದಂತೆ ನೋಡಿಕೊಂಡು ಪರೀಕ್ಷಾ ಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕು. ಸಣ್ಣ ಲೋಪವು ಆಗದಂತೆ ನೋಡಿಕೊಳ್ಳಬೇಕು ಸೂಚನೆ ನೀಡಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಯಾವುದೇ ಕಿಡಿಗೆಡಿಗಳು ಸುಳ್ಳು ವದಂತಿ ಹಬ್ಬಿಸಿ ಪರೀಕ್ಷಾ ವಾತಾವರಣಕ್ಕೆ ಧಕ್ಕೆ ತಂದರೆ ಕೂಡಲೇ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಯಾವುದೇ ಅವಘಡಗಳಿಗೆ ಅವಕಾಶ ಮಾಡಿಕೊಡಬಾರದು. ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಜೆರಾಕ್ಸ್ ಅಂಗಡಿಗಳು, ಸೈಬರ್ ಸೆಂಟರ್ ಗಳನ್ನು ಪರೀಕ್ಷಾ ದಿನದಂದು ಬಂದ್ ಮಾಡಿಸಲು ಅಧಿಕಾರಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು
ಪರೀಕ್ಷಾ ದಿನದಂದು ಬೆಳಿಗ್ಗೆ 8 ಗಂಟೆಒಳಗೆ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಪ್ರತಿಯೊಬ್ಬರು ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸಿರಬೇಕು. ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಮತ್ತು ಪರೀಕ್ಷಾ ನಂತರ ಸ್ಯಾನಿಟೈಸರ್ ನಿಂದ ಕೈಗಳನ್ನು ಶುದ್ಧ ಮಾಡಿಕೊಳ್ಳಬೇಕು. ಸ್ಯಾನಿಟೈಸ್ ವ್ಯವಸ್ಥೆಯನ್ನು ಆರೋಗ್ಯ ತಪಾಸಣಾ ಕೌಂಟರ್ ನಲ್ಲಿ ಹಾಗೂ ಪ್ರತಿ ಕೊಠಡಿಯ ಮುಂಭಾಗದಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಎಲ್ಲಾ ಸುರಕ್ಷತಾ ಕ್ರಮಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮರ್ಪಕ ಕೊಠಡಿ ವ್ಯವಸ್ಥೆ
ಮಕ್ಕಳಿಗೆ ಪರೀಕ್ಷೆ ಬರೆಯಲು ಉತ್ತಮ ವಾತಾವರಣವಿರುವ ಕೊಠಡಿಗಳನ್ನಷ್ಟೇ ಆಯ್ಕೆ ಮಾಡಿಕೋಳ್ಳಬೇಕು. ಕೊಠಡಿಗೆ ಸೂಕ್ತ ಗಾಳಿ, ಬೆಳಕು ವ್ಯವಸ್ಥೆ ಇರಬೇಕು. ಮಳೆ ಬಂದರೆ ತೊಂದರೆಯಾಗಬಾರದು, ವಿದ್ಯುತ್ ಸಂಪರ್ಕ ಇರುವಂತಹ ಕೊಠಡಿಗಳನ್ನೇ ಆಯ್ಕೆ ಮಾಡಬೇಕು, ಯಾವ ವಿದ್ಯಾರ್ಥಿಯೂ ನೆಲದ ಮೇಲೆ ಕೂತು ಪರೀಕ್ಷೆ ಬರೆಯಬಾರದು ಎಲ್ಲರಿಗೂ ಬೆಂಚ್ (ಡೆಸ್ಕ್) ವ್ಯವಸ್ಥೆ ಮಾಡಬೇಕು ಹಾಗೂ ಪರೀಕ್ಷಾ ಪೂರ್ವದಲ್ಲಿ OMR ಶೀಟ್ ನಲ್ಲಿ ಸರಿಯಾಗಿ ನಮೂದಿಸುವ ಬಗ್ಗೆ, ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನದ ಬಗ್ಗೆ ಮಕ್ಕಳಿಗೆ ಪ್ರಯೋಗಿಕವಾಗಿ ತಿಳಿಸಿಕೊಡಬೇಕು. ಈ ಬಾರಿ ಪರೀಕ್ಷೆಯು ಸರಳವಾಗಿರುತ್ತದೆ. ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಹಾಗೆಂದು ನಿರ್ಲಕ್ಷ ವಹಿಸಿ ಅಭ್ಯಾಸ ಕ್ರಮಗಳನ್ನು ನಿಲ್ಲಿಸಬಾರದು. ಎಲ್ಲರೂ A+ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಅಭ್ಯಾಸ ಮಾಡಿಸಲು ಶಿಕ್ಷಕರು ಶ್ರಮವಹಿಸಬೇಕು. ಮಕ್ಕಳು ಭಯ ಪಡದಂತೆ ಜಾಗೃತಿ ಮೂಡಿಸಿ, ಎಲ್ಲಿಯೂ ಪರೀಕ್ಷಾ ನಕಲು ಆಗದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
2 ದಿನದಲ್ಲಿ ಎಸ್ಸೆಸ್ಸೆಲ್ಸಿಪರೀಕ್ಷೆ
ಜುಲೈ 19 ರಂದು ಕೋರ್ ವಿಷಯಗಳಿಗೆ(ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ಮತ್ತು ಜುಲೈ 22 ರಂದು ಭಾಷಾ ವಿಷಯಗಳು (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ) ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೆ 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿದ್ದು, ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆಯು ಒಟ್ಟು 120 ಅಂಕಗಳನ್ನು ಒಳಗೊಂಡಿರುತ್ತದೆ. (ಒಂದು ಪ್ರಶ್ನೆಗೆ ಒಂದು ಅಂಕ, ಪರೀಕ್ಷಾ ಅವಧಿ-3 ಗಂಟೆ) ಅದೇ ರೀತಿ ಕೋರ್ ವಿಷಯಗಳಲ್ಲು ಪ್ರತಿ ವಿಷಯಕ್ಕೆ 40 ಬಹು ಆಯ್ಕೆ ಪ್ರಶ್ನೆಗಳಿದ್ದು, ಕೋರ್ ವಿಷಯಗಳ ಪ್ರಶ್ನೆ ಪತ್ರಿಕೆಯು ಒಟ್ಟು 120 ಅಂಕಗಳನ್ನು ಒಳಗೊಂಡಿರುತ್ತದೆ. (ಒಂದು ಪ್ರಶ್ನೆಗೆ ಒಂದು ಅಂಕ, ಪರೀಕ್ಷಾ ಅವಧಿ-3 ಗಂಟೆ),ಪ್ರಶ್ನೆ ಪತ್ರಿಕೆಗಳು ಬಹು ಅಂಶ ಮಾದರಿ ಮತ್ತು ಸರಳ ನೇರ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಪ್ರತ್ಯೇಕ ಒ.ಎಂ.ಆರ್. ಶೀಟ್ ಇದ್ದು, ಬೇರೆ ಬೇರೆ ಬಣ್ಣದ ಒ.ಎಂ.ಆರ್.ಗಳಿರುತ್ತದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಕನಿಷ್ಟ 12 ವಿದ್ಯಾರ್ಥಿಗಳಿರುವಂತೆ ಮತ್ತು ಡೆಸ್ಕ್ ಗಳ 6 ಅಡಿ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗೂ 1 ಡೆಸ್ಕ್ ಗೆ ಒಬ್ಬವಿದ್ಯಾರ್ಥಿಗೆ ಅವಕಾಶ ಕಲ್ಪಿಸಿ ಕೋವಿಡ್-19ರ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಮುನ್ನಚ್ಚರಿಕೆಯ ಕ್ರಮವಾಗಿ ಒಂದು ಕೊಠಡಿಯನ್ನು ಕಾಯ್ದಿರಿಸಿದ್ದು, ಕೋವಿಡ್ ವಿಶೇಷ ಕೊಠಡಿಯನ್ನು ಒಳಗೊಂಡಿರುತ್ತದೆ.
ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಹೆಲ್ಪ್ ಡೆಸ್ಕ್, ಸ್ಯಾನೀಟೈಸರ್, ಥರ್ಮಲ್ ಸ್ಯ್ಕಾನರ್ ಒಳಗೊಂಡಿರುವಂತೆ ಕೋವಿಡ್-19ರ ಎಸ್.ಒ.ಪಿ.ಯಂತೆ ಪರೀಕ್ಷಾ ಸ್ನೇಹಿ ವಾತಾವರಣವಿರುವ ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ರಚಿಸಲಾಗಿದೆ.
ನೂತನ ಪರೀಕ್ಷಾ ಪದ್ದತಿಯಂತೆ ಪರೀಕ್ಷೆಯು ನಿಶ್ಚಯವಾಗಿ ನಡೆಯಲಿದ್ದು, ಯಾವುದೇ ವಿದ್ಯಾರ್ಥಿಯೂ ಸಹ ಗೈರು ಹಾಜರಾಗದೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಒ.ಎಂ.ಆರ್. ಶೀಟ್ ನಲ್ಲಿ ತಮ್ಮ ಪ್ರವೇಶ ಪತ್ರದ ಸಂಖ್ಯೆಯನ್ನ ಸರಿಯಾಗಿ ನಮೂದಿಸಬೇಕು.