ನವದೆಹಲಿ: ಉದ್ಯೋಗ ಸೃಷ್ಟಿಸಲು ಇಪಿಎಫ್ಒ ಬೆಂಬಲ ಯೋಜನೆಯನ್ನು ಕೇಂದ್ರ ಸರ್ಕಾರ ಮಾರ್ಚ್ 2022 ರ ವರೆಗೆ ವಿಸ್ತರಿಸಿದೆ.
ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ 2022 ರ ಮಾರ್ಚ್ 31 ರವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಾರಂಭಿಸಲಾದ ಈ ಯೋಜನೆಯ ಉದ್ಯೋಗದಾತರಿಗೆ ಹೊಸ ಉದ್ಯೋಗ ಸೃಷ್ಟಿಸಲು ಪ್ರೋತ್ಸಾಹ ನೀಡುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಮೂಲಕ ಕಳೆದುಹೋದ ಉದ್ಯೋಗವನ್ನು ಪುನಃ ಸ್ಥಾಪಿಸಲಾಗುತ್ತದೆ. ಹೊಸ ಉದ್ಯೋಗಿಗಳಿಗೆ ನೋಂದಣಿ ದಿನಾಂಕದಿಂದ ಎರಡು ವರ್ಷದವರೆಗೆ 15,000 ರೂ. ಗಿಂತ ಕಡಿಮೆ ವೇತನ ಪಡೆಯುವವರಿಗೆ ಸಹಾಯಧನ ನೀಡಲಾಗುವುದು.
ಅಂದಾಜು 58.50 ಲಕ್ಷ ಫಲಾನುಭವಿಗಳಿಗೆ 22,810 ಕೋಟಿ ರೂ.ಗಳ ವಿನಿಯೋಗವನ್ನು ಸರ್ಕಾರ ಅನುಮೋದಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದು, ಈ ಯೋಜನೆಯಡಿ ನೋಂದಣಿಯ ಕೊನೆಯ ದಿನಾಂಕ ಜೂನ್ 20, 2021 ಆಗಿದ್ದು, ಸೀತಾರಾಮನ್ ಅವರ ಘೋಷಣೆಯ ನಂತರ ಮಾರ್ಚ್ 22, 2022 ರವರೆಗೆ ವಿಸ್ತರಿಸಲಾಗಿದೆ.
ಆತ್ಮನಿರ್ಭರ ಭಾರತ್ ರೋಜ್ಗರ್ ಯೋಜನೆ ಎಂದರೇನು?
ಕಳೆದ ವರ್ಷ ಘೋಷಿಸಿದ ಆತ್ಮನಿರ್ಭರ ಭಾರತ್ ಯೋಜನೆ ಅಡಿಯಲ್ಲಿ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರ ಇಪಿಎಫ್‌ಒ ಕೊಡುಗೆಗಳನ್ನು ಸರ್ಕಾರವು ಭರಿಸುತ್ತದೆ. ಒಂದು ವೇಳೆ ಸ್ಥಾಪನೆಯ ಸಾಮರ್ಥ್ಯವು 1000 ಉದ್ಯೋಗಿಗಳು ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ಉದ್ಯೋಗದಾತ ಮತ್ತು ಉದ್ಯೋಗಿಗಳ ಇಪಿಎಫ್‌ಒ ಕೊಡುಗೆಯನ್ನು ಸರ್ಕಾರವು ಭರಿಸುತ್ತದೆ. ಆದಾಗ್ಯೂ, ಒಟ್ಟು ನೌಕರರ ಸಂಖ್ಯೆ ಸಂಸ್ಥೆಯಲ್ಲಿ 1000 ಸಂಖ್ಯೆಯನ್ನು ಮೀರಿದರೆ ಆತ್ಮನಿಭರ ಭಾರತ್ ರೊಜ್ಗರ್ ಯೋಜನೆ ಅಡಿಯಲ್ಲಿ, ನೌಕರರ ಪಾಲನ್ನು ಮಾತ್ರ ಸರ್ಕಾರ ಭರಿಸುತ್ತದೆ.
ಈ ವರ್ಷದ ಜೂನ್ 18 ರವರೆಗೆ ಒಟ್ಟು 902 ಕೋಟಿ ರೂ.ಗಳ ಲಾಭವನ್ನು ಸರ್ಕಾರ ಭರಿಸಿದ್ದು, ಒಟ್ಟು 79,577 ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಜೂನ್ 20 ರಂದು ಬಿಡುಗಡೆಯಾದ ವೇತನದಾರರ ಮಾಹಿತಿಯ ಪ್ರಕಾರ, ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಜೊತೆಗಿನ ನಿವ್ವಳ ಹೊಸ ದಾಖಲಾತಿಗಳು ಈ ವರ್ಷದ ಮಾರ್ಚ್‌ನಲ್ಲಿ 11.22 ಲಕ್ಷದಿಂದ ಏಪ್ರಿಲ್‌ನಲ್ಲಿ ಶೇಕಡ 13.73 ರಷ್ಟು ಏರಿಕೆಯಾಗಿ 12.76 ಲಕ್ಷಕ್ಕೆ ತಲುಪಿದೆ ಎಂದು ಹೇಳಲಾಗಿದೆ.
ಮಾರ್ಚ್ 2021 ಕ್ಕೆ ಹೋಲಿಸಿದರೆ ಏಪ್ರಿಲ್ 2021 ರಲ್ಲಿ ನಿರ್ಗಮಿಸುವವರ ಸಂಖ್ಯೆ 87,821 ರಷ್ಟು ಕಡಿಮೆಯಾಗಿದೆ. ಮತ್ತೆ ಸೇರುವ ಸಂಖ್ಯೆ 92,864 ರಷ್ಟು ಹೆಚ್ಚಾಗಿದೆ ಎಂದು ಡೇಟಾ ತಿಳಿಸಿದೆ. ಇಪಿಎಫ್‌ಒ ಚಂದಾದಾರಿಕೆಯಿಂದ ನಿರ್ಗಮಿಸುವವರ ಸಂಖ್ಯೆಯು ಯೋಜನೆಯಲ್ಲಿ ಸೇರ್ಪಡೆಗೊಂಡ ಅಥವಾ ಮತ್ತೆ ಸೇರಿದವರಿಗಿಂತ ಹೆಚ್ಚಾಗಿದೆ ಎನ್ನಲಾಗಿದೆ.