ಸ್ಕೀಮ್ ಒಂದರ ಹಣದ ವಿಚಾರವಾಗಿ ನಡೆದ ವಾದ ತಾರಕಕ್ಕೇರಿದ ಪರಿಣಾಮ 25 ವರ್ಷದ ಸೊಸೆ ತನ್ನ 55 ವರ್ಷದ ಅತ್ತೆಯ ಮೈಮೇಲೆ ಕುದಿಯುವ ಎಣ್ಣೆ ಸುರಿದ ದಾರುಣ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಅತ್ತೆ ಮುಖ, ಕೈ ಹಾಗೂ ಹೆಗಲ ಮೇಲೆಲ್ಲ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಗುಡಿವಾಡ ನಿವಾಸಿಯಾದ ಚುಕ್ಕ ಲಕ್ಷ್ಮೀ ರಾಜ್ಯ ಸರ್ಕಾರದ ಜಗನಣ್ಣ ಚೇಯುತಾ ಸ್ಕೀಮ್ನಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದರು. ಈ ಯೋಜನೆಯ ಫಲಾನುಭವಿಯಾದ ಲಕ್ಷ್ಮೀಗೆ 18 ಸಾವಿರ ರೂಪಾಯಿ ಸರ್ಕಾರದ ವತಿಯಿಂದ ಸಿಕ್ಕಿತ್ತು.
ಈ ಹಣವನ್ನ ನೀಡುವಂತೆ ಸೊಸೆ ಚುಕ್ಕ ಸ್ಪರೂಪ ಪೀಡಿಸಿದ್ದಳು ಎನ್ನಲಾಗಿದೆ.
ಲಕ್ಷ್ಮೀ, ಸೊಸೆ ಸ್ವರೂಪಾಗೆ ಈ ಹಣವನ್ನ ನೀಡಲು ನಿರಾಕರಿಸಿದ್ದಾಳೆ. ಇದೇ ವಿಚಾರವಾಗಿ ಇವರಿಬ್ಬರ ನಡುವೆ 2 ಗಂಟೆಗೂ ಅಧಿಕ ಸಮಯ ವಾದ – ವಿವಾದ ನಡೆದಿದೆ.
ಜಗಳ ಮುಗಿಯುತ್ತಿದ್ದಂತೆಯೇ ಲಕ್ಷ್ಮೀ ಮಲಗಲು ತೆರಳಿದ್ದರು. ಆದರೆ ಇನ್ನೂ ಕೋಪದಲ್ಲೇ ಇದ್ದ ಸ್ವರೂಪ ಬಿಸಿ ಎಣ್ಣೆಯನ್ನ ತಂದು ಲಕ್ಷ್ಮೀ ಮುಖ, ಹೆಗಲು ಹಾಗೂ ಕೈ ಮೇಲೆ ಸುರಿದಿದ್ದಾಳೆ. ಇದರಿಂದ ಲಕ್ಷ್ಮೀಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕೂಡಲೇ ಲಕ್ಷ್ಮೀಯನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಲಕ್ಷ್ಮೀ ದೇಹದ 30 ಪ್ರತಿಶತ ಭಾಗ ಸುಟ್ಟು ಹೋಗಿದೆ. ಆದರೆ ಸದ್ಯ ಲಕ್ಷ್ಮೀ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಲಕ್ಷ್ಮೀ ನೀಡಿರುವ ದೂರನ್ನ ಆಧರಿಸಿ ಪೊಲೀಸರು ಪುತ್ರ ಶಿವ ನಾರಾಯಣ ಹಾಗೂ ಸೊಸೆ ಸ್ವರೂಪಾ ವಿರುದ್ಧ ಐಪಿಸಿ ಸೆಕ್ಷನ್ 326 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.