ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ಡೌನ್ ಆದೇಶ ಅಂತ್ಯವಾದ ಬಳಿಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಾರ್ಷಿಕ ಹಾಗೂ ಅಭಿವೃದ್ಧಿ ಶುಲ್ಕಗಳನ್ನ ಪೋಷಕರಿಂದ ಸಂಗ್ರಹಿಸಲು ಅನುಮತಿ ನೀಡುವ ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ದೆಹಲಿ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶುಲ್ಕ ಸಂಗ್ರಹಣೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಅಧಿಕಾರ ಕೋರಿ ದೆಹಲಿ ಸರ್ಕಾರದ ಡೈರಕ್ಟೋರೇಟ್ ಆಫ್ ಎಜುಕೇಶನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಹಾಗೂ ಅನಿರುದ್ಧ ಬೋಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ದೆಹಲಿ ಹೈಕೋರ್ಟ್ನ ನಿರ್ಧಾರದಿಂದ ಲಕ್ಷಗಟ್ಟಲೇ ಪೋಷಕರಿಗೆ ಆರ್ಥಿಕ ಹೊರೆ ಬೀಳಲಿದೆ ಎಂದು ಹೇಳಿದ್ದರು. ಪ್ರಸ್ತುತ ಸಂದರ್ಭ ಹಾಗೂ ಸತ್ಯಗಳನ್ನ ಪರಿಗಣಿಸಿದಾಗ ದೆಹಲಿ ಹೈಕೋರ್ಟ್ ನೀಡಿದ ಆದೇಶದಲ್ಲಿ ಮಧ್ಯ ಪ್ರವೇಶಿಸಲು ಸರ್ವೋಚ್ಛ ನ್ಯಾಯಲಯ ಒಲವು ತೋರುವುದಿಲ್ಲ ಎಂದು ಹೇಳಿದೆ.