ಪುಣೆಯ ಸಭೆಯಲ್ಲಿ ಭಾಗಿಯಾಗಲು ಬಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹಾಗೂ ಮಹಾರಾಷ್ಟ್ರದ ಹಿರಿಯ ಸಚಿವರ ಕಾರುಗಳು ಸ್ಟೇಡಿಯಂನ ಟ್ರ್ಯಾಕ್ಗಳಲ್ಲಿ ನಿಲ್ಲಿಸಿದ್ದಕ್ಕೆ ಕೇಂದ್ರ ಸಚಿವ ಕಿರಣ್ ರಿಜೀಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕ್ರೀಡೆಗೆ ಆದ ಈ ಅವಮಾನವನ್ನ ನೋಡಲು ನನಗೆ ಅತೀವ ಬೇಸರವಾಗುತ್ತಿದೆ ಎಂದು ರಿಜಿಜು ಟ್ವೀಟಾಯಿಸಿದ್ದಾರೆ.
ನಮ್ಮ ದೇಶದಲ್ಲಿ ಕ್ರೀಡೆ ಹಾಗೂ ಕ್ರೀಡಾ ನೀತಿಗಳಿಗೆ ತೋರಲಾದ ಈ ಅಗೌರವವನ್ನ ನೋಡಲು ನನಗೆ ತುಂಬಾನೇ ದುಃಖವಾಗುತ್ತಿದೆ ಎಂದು ರಿಜಿಜು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಕ್ರೀಡಾ ಸೌಲಭ್ಯಗಳಿಗೆ ತುಂಬಾನೇ ಕೊರತೆಯಿದೆ. ಹೀಗಾಗಿ ಎಲ್ಲಾ ಕ್ರೀಡಾ ಕೇಂದ್ರಗಳನ್ನ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಾದ ಅನಿವಾರ್ಯಕತೆಯಿದೆ ಎಂದು ರಿಜಿಜು ತಿಳಿಸಿದ್ದಾರೆ.
ಶನಿವಾರ ಭಾರತೀಯ ಒಲಂಪಿಯನ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಶರದ್ ಪವಾರ್ ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿದ್ದರು. ಇವರಿಗೆ ಮಹಾರಾಷ್ಟ್ರದ ಕ್ರೀಡಾ ಸಚಿವ ಸುನೀಲ್ ಕೇದಾರ್ ಹಾಗೂ ರಾಜ್ಯ ಸಚಿವೆ ಅದಿತಿ ತತ್ಕರೆ ಕೂಡ ಸಾಥ್ ನೀಡಿದ್ದರು. ಈ ಸ್ಪೋರ್ಟ್ಸ್ ಟ್ರ್ಯಾಕ್ಗಳ ಮೇಲೆ ಕಾರು ನಿಲ್ಲಿಸಲಾದ ಫೋಟೋಗಳನ್ನ ಮೊದಲು ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಲ್ ಪೋಸ್ಟ್ ಮಾಡಿದ್ದರು.
ಇನ್ನು ಘಟನೆ ಸಂಬಂಧ ಕ್ಷಮೆಯಾಚಿಸಿರುವ ಪುಣೆ ಆಡಳಿತ ಮಂಡಳಿ, ಟ್ರ್ಯಾಕ್ನ ಬಳಿಯೇ ಇರುವ ಸಿಮೆಂಟ್ ರಸ್ತೆಯನ್ನ ಬಳಸಲು ಕೇವಲ ಒಂದು ವಾಹನಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಶರದ್ ಪವಾರ್ಗೆ ಕಾಲಿನ ಸಮಸ್ಯೆ ಇರೋದ್ರಿಂದ ಈ ಅನುಮತಿ ನೀಡಲಾಗಿತ್ತು. ಆದರೆ ಉಳಿದ ವಾಹನಗಳು ಅನುಮತಿಯಿಲ್ಲದೇ ಈ ರೀತಿ ನಿಂತಿವೆ ಎಂದು ಸಬೂಬು ನೀಡಿದೆ.