ಮೂರು ವರ್ಷಗಳ ಕಾಲ ಮೀರತ್ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ತಾರಾಚಂದ್ ತಮ್ಮ ಮುಸ್ಲಿಂ ಸ್ನೇಹಿತರ ನೆರವಿನಿಂದ ತಾಹೀರ್ ಎಂದು ಹೆಸರನ್ನ ಬದಲಾಯಿಸಿಕೊಂಡಿದ್ದರು. ಅಲ್ಲದೇ ಗಡ್ಡವನ್ನ ಬೆಳೆಸಲು ಆರಂಭಿಸಿದ್ರು. ಆದರೆ ಇದೆಲ್ಲವನ್ನ ವಿರೋಧಿಸಿ ಬಲಪಂಥೀಯರು ಪ್ರತಿಭಟನೆ ಮಾಡುತ್ತಿದ್ದಂತೆಯೇ ತಾರಾಚಂದ್ ತಮ್ಮ ಗಡ್ಡವನ್ನ ಶೇವ್ ಮಾಡಿದ್ದಾರೆ.
ನಾನು ದೇವಸ್ಥಾನ ಹಾಗೂ ಮಸೀದಿಗೆ ಹೋಗುತ್ತಿದ್ದೆ. ಇದರಲ್ಲಿ ತಪ್ಪೇನಿದೆ..? ದೇವರು ಎಲ್ಲರಿಗೂ ಒಂದೇ. ದೇವರನ್ನ ಆರಾಧಿಸಲು ಯಾವ ಧರ್ಮ ಪಾಲಿಸುತ್ತೇವೆ ಅನ್ನೋದು ಮುಖ್ಯವಲ್ಲ ಎಂದು ತಾರಾ ಚಂದ್ ಹೇಳಿದ್ದಾರೆ. ಆದರೆ ಮೀರತ್ನ ಕಿತ್ಹೋರ್ ಎಂಬಲ್ಲಿ ಹಿಂದೂ ಧರ್ಮಿಯರು ಮಾಡಿದ ಪ್ರತಿಭಟನೆಯಿಂದ ತಾರಾ ಚಂದ್ ಹೆದರಿದ್ದಾರೆ.
ಕಳೆದ ತಿಂಗಳು 19ನೇ ತಾರೀಖಿನಂದು ಚಾಂದ್ ಜೈಲಿನಿಂದ ಬಿಡುಗಡೆಯಾಗಿದ್ದರು. ಮೊದ ಮೊದಲು ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಆದರೆ ಕ್ರಮೇಣವಾಗಿ ಚಾಂದ್ ಮುಸ್ಲಿಂ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಚಾಂದ್ ಗಡ್ಡ ಬೋಳಿಸಲೇಬೇಕಾಗಿ ಬಂದಿದೆ.
ನಾನು 42 ತಿಂಗಳುಗಳ ಕಾಲ ಜೈಲಿನಲ್ಲಿದ್ದೆ. ಈ ಕಠಿಣ ಸಂದರ್ಭದಲ್ಲಿ ನನ್ನ ಸ್ನೇಹಿತರ್ಯಾರೂ ನನ್ನ ಸಹಾಯಕ್ಕೆ ಧಾವಿಸಿರಲಿಲ್ಲ. ಆದರೆ ಉಸ್ಮಾನ್ ಹಾಗೂ ಆತನ ಸ್ನೇಹಿತರು ನನಗೆ ನೆರವಾಗಿದ್ದರು. ನನ್ನ ಕೇಸ್ ಗೆಲ್ಲುವ ಸಲುವಾಗಿ ಹಣ ಹೊಂದಿಸಲು ದೇಣಿಗೆ ಸಂಗ್ರಹಿಸಿದ್ರು. ಅವರು ನಮಾಜ್ ಮಾಡೋದನ್ನೆಲ್ಲ ನಾನು ಗಮನಿಸುತ್ತಿದೆ. ಹೀಗಾಗಿ ನಾನೂ ಸಹ ಅವರಂತೆ ಗಡ್ಡ ಬಿಡಲು ಆರಂಭಿಸಿದೆ. ಆದರೆ ನಾನೆಂದೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರಲಿಲ್ಲ ಎಂದು ಚಾಂದ್ ಸ್ಪಷ್ಟನೆ ನೀಡಿದ್ದಾರೆ.