ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಆದರೆ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳು ಈಗ ಕಳವಳವನ್ನುಂಟುಮಾಡುತ್ತಿವೆ. ಒಡಿಶಾದಲ್ಲಿ 62 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರವನ್ನು ಗೆದ್ದು ಬಂದಿದ್ದಾನೆ. ಕೊರೊನಾ ಸೋತಿದ್ದು ಹೇಗೆ ಎಂಬುದನ್ನು ಆತ ಹೇಳಿದ್ದಾನೆ.
ಬಾರ್ಕೋಟ್ ಬ್ಲಾಕ್ನ ನಿವಾಸಿ ಈ ವ್ಯಕ್ತಿ ಕೊವಿಡ್ 19 ಸಾಂಕ್ರಾಮಿಕ ರೋಗವನ್ನು ಒಂದು ತಿಂಗಳೊಳಗೆ ಸೋಲಿಸಿದ್ದೇನೆಂದು ಹೇಳಿದ್ದಾನೆ. ಮನೆಯಲ್ಲಿಯೇ ಇದ್ದು ವೈದ್ಯರ ಎಲ್ಲಾ ಸಲಹೆಗಳನ್ನು ಪಾಲಿಸಿ ಕೊರೊನಾ ಗೆದ್ದಿದ್ದಾರಂತೆ. ಬೇಗ ಚೇತರಿಸಿಕೊಳ್ಳಲು ವೈದ್ಯರು ನೀಡಿದ ಸಲಹೆ ಪಾಲಿಸಿದ್ದು ಸಹಕಾರಿಯಾಗಿದೆ ಎಂದಿದ್ದಾನೆ.
ಏಪ್ರಿಲ್ 23 ರಂದು ದೇಹದಲ್ಲಿ ನೋವು ಮತ್ತು ಜ್ವರದ ರೋಗಲಕ್ಷಣ ಕಾಣಿಸಿಕೊಂಡಿತ್ತು. ಪರೀಕ್ಷಿಸಿದಾಗ ಕೊರೊನಾ ಡೆಲ್ಟಾ ಪ್ಲಸ್ ಇರುವುದು ಕಂಡು ಬಂದಿತ್ತು. ಮಾರ್ಚ್ 30 ರಂದು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದರಂತೆ. ಕೊರೊನಾ ವೈರಸ್ ಸೋಲಿಸಲು ನನಗೆ 20 ರಿಂದ 25 ದಿನಗಳು ಬೇಕಾಯಿತು. ಆಸ್ಪತ್ರೆಗೆ ಹೋಗದೆ ಗುಣಮುಖನಾದೆ ಎಂದು ಆತ ಹೇಳಿದ್ದಾನೆ.
ಈ ವ್ಯಕ್ತಿಗೆ ಕೊರೊನಾ ಡೆಲ್ಟಾ ಪ್ಲಸ್ ಪತ್ತೆಯಾಗ್ತಿದ್ದಂತೆ ಊರಿನ ಎಲ್ಲರ ಪರೀಕ್ಷೆ ಮಾಡಲಾಗಿತ್ತು. 81 ಜನರಿಗೆ ಲಕ್ಷಣ ಕಾಣಿಸಿತ್ತು. ಅದ್ರಲ್ಲಿ ನಾಲ್ಕು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು. ಉಳಿದವರೆಲ್ಲ ಮನೆಯಲ್ಲಿಯೇ ಗುಣಮುಖರಾದರು. ಈ ಘಟನೆ ನೋಡಿದ್ರೆ ಡೆಲ್ಟಾ ಪ್ಲಸ್ ಮೇಲೆ ಕೋವಿಶೀಲ್ಡ್ ಲಸಿಕೆ ಪರಿಣಾಮ ಬೀರ್ತಿದೆ ಎನ್ನಬಹುದು.