ಲೂಧಿಯಾನಾದ ಭಾಯ್ ರಂದೀರ್ ಸಿಂಗ್, ನಗರದ ಸಿ ಬ್ಲಾಕ್ ಮಾರ್ಕೆಟ್ನಲ್ಲಿ ಮಹಿಳೆಯರ ಬಟ್ಟೆ ಅಂಗಡಿಯೊಂದು ಆರಂಭಿಸಿದ್ದು, ಅಂಗಡಿ ಹೆಸರಿನ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅಂಗಡಿಗೆ ಪಾಕಿಸ್ತಾನಿ ಅಟೈರ್ ( ಪಾಕಿಸ್ತಾನಿ ಉಡುಪು ) ಎಂದು ಹೆಸರಿಡಲಾಗಿದ್ದು ಇದನ್ನ ನೋಡಿದ ಪಾಕ್ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಂಗಡಿಯ ಹೆಸರನ್ನ ನೋಡಿ ಖುಷಿಪಟ್ಟ ನೆರೆರಾಷ್ಟ್ರ ಪಾಕಿಸ್ತಾನದ ಜನತೆಗೆ ಭಾರತದಲ್ಲಿ ಈ ಅಂಗಡಿಯನ್ನ ನಿರ್ಮಿಸಿದ ಮಾಲೀಕನನ್ನ ಭೇಟಿಯಾಗಲು ಬಯಸುತ್ತೇವೆ ಎಂದು ಖುಷಿಯನ್ನ ಹೊರಹಾಕಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅಂಗಡಿ ಮಾಲೀಕ 36 ವರ್ಷದ ಪುನೀತ್ ಕುಮಾರ್, ಕಳೆದ 7 ವರ್ಷಗಳಿಂದ ನಾನು ಪಾಕಿಸ್ತಾನದಿಂದಲೇ ಚೂಡಿದಾರ್, ದುಪ್ಪಟ್ಟಾ, ಕುರ್ತಾ ಸೇರಿದಂತೆ ವಿವಿಧ ಉಡುಪುಗಳನ್ನ ತರಿಸುತ್ತಿದ್ದೇನೆ. ಪಾಕಿಸ್ತಾನದಿಂದ ತರಿಸಿದ ಈ ಬಟ್ಟೆಗಳಿಗೆ ಇಲ್ಲಿಯವರೆಗೆ ಯಾವೊಬ್ಬ ಗ್ರಾಹಕರಿಂದಲೂ ದೂರು ಬಂದಿಲ್ಲ ಎಂದು ಹೇಳಿದ್ರು.
ಫೇಸ್ಬುಕ್ನಲ್ಲಿ ಈ ಫೋಟೋಗಳನ್ನ ಹಾಕಿದ ಬಳಿಕ ಕೆಲವರು ಪಾಕಿಸ್ತಾನಕ್ಕೆ ಪ್ರಚಾರ ನೀಡಬೇಡಿ ಎಂದು ಹೇಳಿದ್ರು. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಅಥವಾ ಗ್ರಾಹಕರಿಗಾಗಲಿ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಪಾಕಿಸ್ತಾನವು ಉಡುಪು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಪಾಕಿಸ್ತಾನದ ಬಟ್ಟೆಗಳಿಗೆ ಇಲ್ಲಿ ಅಭಿಮಾನಿಗಳಿದ್ದಾರೆ ಎಂದು ಹೇಳಿದ್ರು.