ಕಲಬುರಗಿ: ಕೋವಿಡ್ ಹಿನ್ನೆಲೆ ನಡೆಯದೆ ಇರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜುಲೈ 15 ರಿಂದ ಆರಂಭಗೊಳ್ಳಲಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ದಯಾನಂದ ಅಗಸರ ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿರುವ ರಾಧಾಕೃಷ್ಣ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 15 ರಂದು 1, 3 ಹಾಗೂ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಆಗಸ್ಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ಈಗಾಗಲೇ ಮೇ 3 ರಿಂದ 2, 4 ಹಾಗೂ 6 ನೇ ಸೆಮಿಸ್ಟರ್ ಆನ್ಲೈನ್ ಕ್ಲಾಸ್ ಗಳು ಶುರುವಾಗಿರುವದರಿಂದ ಸೆಪ್ಟೆಂಬರ್ ಕೊನೆಯ ವಾರದಲ್ಲಿ 2, 4 ಹಾಗೂ 6 ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳ ಪರೀಕ್ಷೆ ಸಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ವಿವಿಯಲ್ಲಿ ಖಾಲಿಯಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಪಕರ ಹುದ್ದೆಗಳು ಸೇರಿದಂತೆ ಶಿಕ್ಷಕೇತರ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದಲ್ಲದೆ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಯಡಿಯಲ್ಲಿ 4 ವರ್ಷದ ಪದವಿ ಕೋರ್ಸ್ಗಳನ್ನು ಗುಲ್ಬರ್ಗಾ ವಿವಿಯಲ್ಲಿ ಜಾರಿಗೆ ತರಲಾಗುವುದು. ನಿಟ್ಟಿನಲ್ಲಿ ಮುಂಬರುವ 2021-22ನೇ ಶೈಕ್ಷಣಿಕ ವರ್ಷದಿಂದ ವಿ.ವಿಯ ವಾಣಿಜ್ಯ, ಎಜುಕೇಶನ್ (ಶಿಕ್ಷಣ ಶಾಸ್ತ್ರ), ಬಿ.ಕಾಂ ಸೇರಿದಂತೆ ಕೆಲವೊಂದು ವಿಭಾಗದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು. ಈ ಮೂಲಕ ವಿ.ವಿ ವ್ಯಾಪ್ತಿಯ ನ್ಯಾಕ್ ಮಾನ್ಯತೆ ಪಡೆದ ಮಹಾವಿದ್ಯಾಲಯಗಳು ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬಹುದು ಎಂದು ಹೇಳಿದರು.
ವಿಭಜಿತ ರಾಯಚೂರು ವಿಶ್ವವಿದ್ಯಾಲಯಕ್ಕೆ ಸುಮಾರು 224 ಮಹಾವಿದ್ಯಾಲಯಗಳ ಕಟ್ಟಡ, ಜಮೀನು ಹಾಗೂ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ ಎಂದ ಅವರು, ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಜಿ.ಇ.ಆರ್ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಾಲೇಜುಗಳಿಗೆ ಸಂಲಗ್ನತೆಗೆ ಅವಕಾಶ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ, ವಿತ್ತಾಧಿಕಾರಿ ಬಿ. ವಿಜಯ ಹಾಗೂ ಎಲ್ಲಾ ನಿಕಾಯಗಳ ಡೀನ್ ಗಳು ಉಪಸ್ಥಿತರಿದ್ದರು.