ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ನಿಜ. ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಮನನೊಂದು ರಾಜೀನಾಮೆ ಕೊಡಲು ನಿರ್ಧರಿಸಿದ್ದೆ. ರಾಜಕೀಯದಿಂದಲೇ ನಿವೃತ್ತಿ ಪಡೆಯುವ ಬಗ್ಗೆಯೂ ಯೋಚಿಸಿದ್ದೆ. ಆದರೆ ಕೆಲವರು ಆಪ್ತರು ಹಾಗೂ ಹಿರಿಯರ ಸಲಹೆ ಮೇರೆಗೆ ಸ್ವಲ್ಪ ದಿನ ಕಾಯಲು ತೀರ್ಮಾನಿಸಿದ್ದೇನೆ ಎಂದರು.
ಒಂದು ವೇಳೆ ರಾಜೀನಾಮೆ ನೀಡಿದರೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಗೆ ಯಾವುದೇ ಕಾರಣಕ್ಕೂ ದ್ರೋಹ ಬಗೆಯಲ್ಲ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೇ ಅಂತ್ಯವಾಗಲಿದೆ ಹೊರತು ಕಾಂಗ್ರೆಸ್ ಗೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.