ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಜೊತೆಗೆ ಚುನಾವಣೆ ನಡೆಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸರ್ವ ಪಕ್ಷದ ನಾಯಕರ ನಿಯೋಗದ ಜೊತೆ ಸಮಾಲೋಚನೆ ನಡೆಸಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬ್ಲಾಕ್ ಲೆವೆಲ್ ಚುನಾವಣೆಗಳು ನಡೆಯುತ್ತಿದ್ದು, ಸಕಾರಾತ್ಮಕ ಬದಲಾವಣೆ ಕಂಡಿದೆ ಎಂದು ಹೇಳಿದ್ದಾರೆ.
ಸಭೆಯ ನಂತರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಭರವಸೆ ನೀಡಿದಂತೆ ಶಾಂತಿ ಸ್ಥಾಪನೆ, ಅಧಿಕಾರ, ವಿಧಾನಸಭೆ ಚುನಾವಣೆ, ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಮುಖ ಮೈಲುಗಲ್ಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಲಾಕ್ ಲೆವೆಲ್ ಚುನಾವಣೆಗಳು ನಡೆದಿವೆ. ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪಂಚಾಯತ್ ಮತ್ತು ಲೋಕಸಭಾ ಚುನಾವಣೆಗಳಿಗಿಂತ ಡಿಡಿಸಿ ಚುನಾವಣೆಯ ಮತದಾನವು ಶೇಕಡ 51 ರಷ್ಟು ಹೆಚ್ಚಾಗಿದೆ. ಕರ್ತವ್ಯದಲ್ಲಿರುವ 4,483 ಸರಪಂಚರಲ್ಲಿ 3,650 ಜನರನ್ನು ಆಯ್ಕೆ ಮಾಡಲಾಗಿದೆ. ಈ ಪ್ರದೇಶದಲ್ಲಿ ತಳಮಟ್ಟದ ಕೆಲಸಗಳನ್ನು ಬಲಪಡಿಸುವ ಬಗ್ಗೆ ಕೇಂದ್ರವು ಕ್ರಮಕೈಗೊಂಡಿದ್ದು, 3,000 ಕೋಟಿ ರೂ. ಮೌಲ್ಯದ ಯೋಜನೆಗಳ ಆರ್ಥಿಕ ಅಧಿಕಾರವನ್ನು ಪಂಚಾಯಿತಿಗಳಿಗೆ ಹಸ್ತಾಂತರಿಸಿದೆ ಎಂದು ಹೇಳಲಾಗಿದೆ.
ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸ್ಕಿಲ್ ಇಂಡಿಯಾದ ಮೂಲಕ ಅನೇಕ ಯೋಜನೆ ರೂಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಬಹಳ ಸರಾಗವಾಗಿ ನಡೆಸಲಾಗಿದೆ ಎಂದು ಕೇಂದ್ರ ಹೇಳಿದೆ.
ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಎಷ್ಟು ಸುಗಮವಾಗಿ ಪುನಃಸ್ಥಾಪಿಸಬಹುದು ಎಂಬುದರ ಬಗ್ಗೆ ಕೇಂದ್ರ ಗಮನ ಕೇಂದ್ರೀಕರಿಸಿದೆ, ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ ಎಂದು ಸಭೆಯಲ್ಲಿ ಮೋದಿ ಹೇಳಿದರು.
ಮಾಜಿ ಡಿಸಿಎಂ ನಿರ್ಮಲ್ ಸಿಂಗ್ ಅವರು, ಆರ್ಟಿಕಲ್ 370 ರ ವಿಷಯದಲ್ಲಿ ಪಕ್ಷಗಳು ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡಬೇಕೆಂದು ಹೇಳಿದರು. ಅಲ್ಲದೇ ಗುಪ್ಕರ್ ಅಲೈಯನ್ಸ್ ಪಕ್ಷಗಳು ಕೂಡ ವಿಷಯವನ್ನು ಪ್ರಸ್ತಾಪಿಸಿ ರಾಜಕೀಯ ಕೈದಿಗಳ ಬಿಡುಗಡೆ ಬಗ್ಗೆ ಹೇಳಿದಾಗ ಪ್ರಧಾನಿ ಮೋದಿ ಅಗತ್ಯ ಕ್ರಮದ ಭರವಸೆ ನೀಡಿದರು ಎಂದು ನಿರ್ಮಲ್ ಸಿಂಗ್ ಹೇಳಿದರು.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿ ಕೇವಲ ಒಂದು ಡಜನ್ ಕೈದಿಗಳು ಮಾತ್ರ ಇನ್ನೂ ಬಂಧನದಲ್ಲಿದ್ದಾರೆ ಎಂದು ಹೇಳಿದರು.