ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಸುಪಾರಿ ಕೊಟ್ಟು ತನ್ನ ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸಮೂರ್ತಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅವರ ಮಗ ರೋಹಿತ್ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದು, ವ್ಯವಹಾರದಲ್ಲಿ ತಂದೆ 52 ಲಕ್ಷ ರೂಪಾಯಿ ನಷ್ಟವನ್ನುಂಟು ಮಾಡಿದ್ದರಿಂದ ಕೋಪಗೊಂಡಿದ್ದ. ತನ್ನ ತಾಯಿ ನಿಧನದ ನಂತರ ತಂದೆ ಅಕ್ರಮ ಸಂಬಂಧ ಬೆಳೆಸಿ ಕುಟುಂಬಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದ. ತಂದೆಯ ನಡವಳಿಕೆ ಬಗ್ಗೆ ಬೇಸರಗೊಂಡ ರೋಹಿತ್ ಸ್ನೇಹಿತರಾದ ರಂಗನಾಥ, ರವಿಕುಮಾರ್ ಅವರಿಗೆ 1 ಲಕ್ಷ ರೂ.ಗೆ ಸುಪಾರಿ ನೀಡಿ 30 ಸಾವಿರ ರೂ. ಮುಂಗಡ ಕೊಟ್ಟಿದ್ದಾನೆ.
ಶ್ರೀನಿವಾಸ ಮೂರ್ತಿ ಅವರ ತೋಟದಲ್ಲಿಯೇ ಜೂನ್ 14 ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಿಂದೆಯೂ ತಂದೆಯ ಕೊಲೆಗೆ ರೋಹಿತ್ ಹಲವು ಸಲ ಪ್ರಯತ್ನ ನಡೆಸಿದ್ದ ಎಂದು ಹೇಳಲಾಗಿದೆ.