ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಜನರು ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬ ವಿಷ್ಯ ಅಧ್ಯಯನದಿಂದ ಗೊತ್ತಾಗಿದೆ. ಐಸಿಎಂಆರ್ ಈಶಾನ್ಯ ಮತ್ತು ಅಸ್ಸಾಂ ವೈದ್ಯಕೀಯ ಕಾಲೇಜು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ.
ಮೊದಲು ಸೋಂಕಿಗೆ ಒಳಗಾದ ಜನರಲ್ಲಿ ಲಸಿಕೆಯ ಒಂದು ಡೋಸ್ ಕೂಡ ಸಾಕಷ್ಟು ರೋಗನಿರೋಧಕ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವು ತಿಳಿಸಿದೆ. ಇದು ದೇಶದಲ್ಲಿನ ಲಸಿಕೆ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವರದಿಯ ಪ್ರಕಾರ, ತಜ್ಞರು 18 ಮತ್ತು 75 ವರ್ಷದ ಮಹಿಳೆಯರು ಮತ್ತು ಪುರುಷರನ್ನು ಅಧ್ಯಯನ ಮಾಡಿದ್ದಾರೆ. ಮೂರು ವಿಧದಲ್ಲಿ ಅಧ್ಯಯನ ನಡೆಸಲಾಗಿದೆ. ಲಸಿಕೆ ಮೊದಲು, ಮೊದಲ ಡೋಸ್ ಪಡೆದ 25-35 ದಿನಗಳು ಮತ್ತು ಎರಡನೇ ಡೋಸ್ ಪಡೆದ 25-35 ದಿನಗಳನ್ನು ಅಧ್ಯಯನಕ್ಕೆ ಬಳಸಲಾಗಿದೆ. ಸೋಂಕಿಗೆ ಒಳಗಾದ ಮತ್ತು ಲಸಿಕೆಯ ಒಂದು ಡೋಸ್ ಪಡೆದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ. ಒಟ್ಟು 121 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.
ಮೊದಲ ಡೋಸ್‌ಗೆ ಹೋಲಿಸಿದರೆ ಎರಡನೇ ಡೋಸ್ ಪ್ರತಿಕಾಯವನ್ನು ಗಮನಾರ್ಹವಾಗಿ ಹೆಚ್ಚಿಸುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ರೋಗನಿರೋಧಕ ಶಕ್ತಿ ಇಲ್ಲದ ಜನರಿಗೆ ಲಸಿಕೆ ನೀಡಲು ಒತ್ತು ನೀಡಬೇಕೆಂದು ವರದಿಯಲ್ಲಿ ಹೇಳಲಾಗಿದೆ.