ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಲಸಿಕೆ ಪಡೆದ ಕೊರೊನಾ ಲಸಿಕಾ ಕೇಂದ್ರದಲ್ಲಿ ಐಎಎಸ್ ಅಧಿಕಾರಿ ಸೋಗಿನಲ್ಲಿದ್ದ ವ್ಯಕ್ತಿಯೊಬ್ಬ ಸಾವಿರಕ್ಕೂ ಹೆಚ್ಚು ಲಸಿಕೆ ಪಡೆದವರ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದು ಈತನನ್ನ ಪೊಲೀಸರು ಜೈಲಿಗಟ್ಟಿದ್ದಾರೆ.
ಐಎಎಸ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿ ಆರೋಪಿ ಎಂದು ತಿಳಿದ ಬಳಿಕ ಈ ಲಸಿಕಾ ಕೇಂದ್ರದಲ್ಲಿ ನಿಜವಾದ ಲಸಿಕೆ ಹಾಕಿದ್ದಾರೆಯೇ ಇಲ್ಲವೇ ಎಂಬ ಅನುಮಾನ ಇದೀಗ ಜನರಲ್ಲಿ ಶುರುವಾಗಿದೆ.
ಮಿಮಿ ಚಕ್ರವರ್ತಿ ಲಸಿಕೆ ಪಡೆದ ಬಳಿಕ ತಮಗಿರುವ ಶಂಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವು ಲಸಿಕೆ ಪಡೆದ ಬಳಿಕ ಅಧಿಕೃತವಾಗಿ ಯಾವುದೇ ದೃಢೀಕರಣ ಸಿಗಲಿಲ್ಲ ಎಂದು ಹೇಳಿದ್ದರು. ಈ ಲಸಿಕಾ ಕೇಂದ್ರಕ್ಕೆ ನಟಿ ಹಾಗೂ ರಾಜಕಾರಣಿ ಮಿಮಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ಲಸಿಕಾ ಅಭಿಯಾನವನ್ನ ಬಂಧಿತ ಆರೋಪಿ ದೇಬಾಂಜನ್ ದೇವ್ ಆಯೋಜಿಸಿದ್ದ.
ಜನರಲ್ಲಿ ಕೊರೊನಾ ಲಸಿಕೆಯ ಭಯ ಹೋಗಲಾಡಿಸುವ ಸಲುವಾಗಿ ಇದೇ ಕ್ಯಾಂಪ್ನಲ್ಲಿ ಮಿಮಿ ಕೂಡ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದರು. ಇದಾದ ಬಳಿಕ 250ಕ್ಕೂ ಅಧಿಕ ಮಂದಿ ಇದೇ ಕ್ಯಾಂಪ್ನಲ್ಲಿ ಕೋವಿಡ್ ಲಸಿಕೆಯನ್ನ ಸ್ವೀಕರಿಸಿದ್ದರು.
ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ ಈತ ನನ್ನ ಬಳಿ ಬಂದು ತಾನು ವಿಶೇಷವಾಗಿ ತೃತೀಯ ಲಿಂಗಿಗಳಿಗೆ ಹಾಗೂ ದಿವ್ಯಾಂಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ಯಾಂಪ್ ಆಯೋಜಿಸಿದ್ದೇನೆ. ತಾವು ದಯಮಾಡಿ ಈ ಕ್ಯಾಂಪ್ಗೆ ಭೇಟಿ ನೀಡಬೇಕು ಎಂದು ಹೇಳಿದ್ದನು ಅಂತಾ ಸಂಸದೆ ಮಿಮಿ ಚಕ್ರವರ್ತಿ ಹೇಳಿದ್ದಾರೆ.
ನಾನು ಜನರಿಗೆ ಪ್ರೇರಣೆ ನೀಡಬೇಕೆಂಬ ನಿಟ್ಟಿನಲ್ಲಿ ಇದೇ ಕ್ಯಾಂಪ್ನಲ್ಲಿ ಕೋವಿಶೀಲ್ಡ್ ಲಸಿಕೆಯನ್ನ ಸ್ವೀಕರಿಸಿದೆ. ಆದರೆ ನನಗೆ ಇಲ್ಲಿಯವರೆಗೆ ಯಾವುದೇ ದೃಢೀಕರಣ ಮೆಸೇಜ್ ಬಂದಿಲ್ಲ ಎಂದು ಮಿಮಿ ಹೇಳಿದ್ದಾರೆ. ಕೇವಲ ಮಿಮಿ ಮಾತ್ರವಲ್ಲದೇ ಇಲ್ಲಿ ಲಸಿಕೆ ಪಡೆದ ಯಾರಿಗೂ ಸಹ ಸರ್ಕಾರದ ಕಡೆಯಿಂದ ಮೊದಲ ಡೋಸ್ ಪಡೆದ ಬಗ್ಗೆ ದೃಢೀಕರಿಸುವ ಮೆಸೇಜ್ ಬಂದಿಲ್ಲ.
ಇದರಿಂದ ಅನುಮಾನಗೊಂಡ ಮಿಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದನ್ನ ಆಧರಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದು ನಕಲಿ ಲಸಿಕೆಯೋ ಅಥವಾ ಅವಧಿ ಮೀರಿದ ಲಸಿಕೆಯೋ ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದೆ .