ಬೆಂಗಳೂರು: ರಾಜ್ಯ ಸರ್ಕಾರ ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಇದರಿಂದ 70 ಸಾವಿರ ಎಕರೆ ಜಮೀನು ಲಕ್ಷಾಂತರ ರೈತರ ಹೆಸರಿನಲ್ಲಿ ದಾಖಲಾಗಲಿದೆ.
ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ. ಈ ಕುರಿತಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಸಮಿತಿಯ ಶಿಫಾರಸನ್ನು ಪರಿಗಣಿಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ.
ಇನಾಂ ಜಮೀನುಗಳ ಭೋಗದ ಹಕ್ಕು ಪಡೆಯಲು ಜಿಲ್ಲಾಧಿಕಾರಿ, ಉಪ ನೋಂದಣಾಧಿಕಾರಿ, ತಹಶೀಲ್ದಾರ್, ಭೂ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ಇನಾಂ ರದ್ದತಿ ಕಾಯ್ದೆಯ ಮೂಲಕ ರಾಜ್ಯದ ಇನಾಂ ಜಮೀನು ಉಳುಮೆ ಮಾಡುವ ರೈತರ ಹೆಸರಿಗೆ ಸ್ವಾಧೀನದ ಹಕ್ಕು ಪತ್ರ ನೀಡಿದ್ದು, ಇದರ ಹೊರತಾಗಿಯೂ ಅನೇಕ ಜಿಲ್ಲೆಗಳಲ್ಲಿ, ರೈತರು ಹಾಗೆಯೇ ಉಳುಮೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿಲ್ಲ. ಭೂಮಿಯ ಅಧಿಕೃತ ಹಕ್ಕು, ಪಹಣಿ ಇಲ್ಲದೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ 70 ಸಾವಿರ ಎಕರೆಯಷ್ಟು ಜಮೀನನ್ನು ರೈತರ ಹೆಸರಿಗೆ ದಾಖಲಿಸಿ ಕೊಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.