ತೂಕ ಇಳಿಕೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ 57 ಕೆಜಿ ತೂಕ ಇಳಿಸಿದ ಬಳಿಕ ಆಕೆಯ ಹಲ್ಲು ಉದುರಿಹೋಗಿತ್ತು ಎಂಬ ವಿಚಾರವನ್ನ ಇಂಟರ್ನೆಟ್ನಲ್ಲಿ ಬಹಿರಂಗಪಡಿಸಿದ್ದಾರೆ .
33 ವರ್ಷದ ಕ್ಯಾಥಿ ಬ್ಲೈಥ್ ಎಂಬಾಕೆ 2011ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಈ ಶಸ್ತ್ರಚಿಕಿತ್ಸೆಯ ಬಳಿಕ ಕ್ಯಾಥಿ ತನ್ನ ತೂಕವನ್ನ ಇಳಿಸಿದ್ದಳು. ಆದರೆ ಕೇವಲ ತೂಕ ಮಾತ್ರವಲ್ಲದೇ ಈಕೆ ಇನ್ನೂ ಅನೇಕ ಸಮಸ್ಯೆಗಳನ್ನ ಎದುರಿಸಿದ್ದಾಳಂತೆ.
ಕ್ಯಾಥಿ ಶಸ್ತ್ರಚಿಕಿತ್ಸೆಯ ಬಳಿಕ ರಕ್ತಹೀನತೆ ಸಮಸ್ಯೆ ಹಾಗೂ ವಿಟಾಮಿನ್ ಕೊರತೆಯನ್ನ ಅನುಭವಿಸಿದ್ದಳು ಇದರಿಂದ ಆಕೆಯ ಹಲ್ಲಿನ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರಿತ್ತು ಎಂದು ಹೇಳಿದ್ದಾಳೆ.
ಶಸ್ತ್ರಚಿಕಿತ್ಸೆಗೂ ಮುನ್ನ ನನ್ನ ಹಲ್ಲು ಸುಂದರವಾಗಿಯೂ ಆರೋಗ್ಯವಾಗಿಯೂ ಇತ್ತು. 24 ವರ್ಷದವರೆಗೆ ನಾನು ಹಲ್ಲು ನೋವನ್ನೂ ಕಂಡವಳಲ್ಲ. ಆದರೆ ನನ್ನ ಈ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಹಲ್ಲಿನ ಆರೋಗ್ಯ ಸಂಪೂರ್ಣವಾಗಿ ಹಾಳಾಗಿತ್ತು. ಅಲ್ಲದೇ ಅವು ಉದುರಿ ಹೋದವು. ಕಳೆದ 8 ವರ್ಷಗಳಲ್ಲಿ ನಾನು ನನ್ನ ಹಲ್ಲನ್ನ ಉಳಿಸಿಕೊಳ್ಳಲು ಸಾಕಷ್ಟು ಹಣವನ್ನ ವ್ಯರ್ಥ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಸಾವಿರಾರು ಡಾಲರ್ ಹಣ ಖರ್ಚು ಮಾಡಿ ಕ್ಯಾಥಿ ತನ್ನ ಹಲ್ಲುಗಳನ್ನ ಉಳಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಯಾವುದೇ ಪ್ರಯತ್ನವೂ ಪ್ರಯೋಜನಕ್ಕೆ ಬಾರಲಿಲ್ಲ. ಹೀಗಾಗಿ ಎಲ್ಲಾ ಹಲ್ಲುಗಳನ್ನ ತೆಗೆಸಿ ಇದೀಗ ಹಲ್ಲಿನ ಸೆಟ್ ಹಾಕಿಸಿಕೊಂಡಿದ್ದಾಳೆ.