ಮೈಸೂರಿನಲ್ಲಿ ಕೊರೊನಾ ವೈರಸ್ ವಾಸಿಯಾದರೂ ಸಹ ನೆಮ್ಮದಿ ಇಲ್ಲ ಎಂಬಂತಾಗಿದೆ. ಕೊರೊನಾದಿಂದ ವಾಸಿಯಾದ ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಸಿಂಡ್ರೋಮ್ ಕಾಣಿಸಿಕೊಳ್ತಾ ಇರೋದು ಹೊಸ ಆತಂಕಕ್ಕೆ ಕಾರಣವಾಗಿದೆ.
ಮಲ್ಟಿ ಸಿಸ್ಟಮ್ ಇನ್ಫಾಮೇಟರಿ ಸಿಂಡ್ರೋಮ್ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರ್ತಿದೆ. ಮೈಸೂರಿನ ಚಲುವಾಂಬಾ ಆಸ್ಪತ್ರೆಯಲ್ಲಿ ಪ್ರಸ್ತುತ 11 ಮಕ್ಕಳಿಗೆ ಚಿಕಿತ್ಸೆಯನ್ನ ನೀಡಲಾಗುತ್ತಿದೆ.
ಈಗಾಗಲೇ ಚಿಕಿತ್ಸೆ ಫಲಕಾರಿಯಾಗದೇ ಒಂದು ಮಗು ಸಾವನ್ನಪ್ಪಿದೆ ಎಂದು ಚಲುವಾಂಬಾ ಆಸ್ಪತ್ರೆ ಅಧೀಕ್ಷಕಿ ಡಾ. ಸುಧಾ ರುದ್ರಪ್ಪ ಮಾಹಿತಿ ನೀಡಿದ್ದಾರೆ.
ಎಂಐಎಎಸ್ಸಿ ಅನ್ನೋದು ಮಕ್ಕಳಲ್ಲಿ ಕೋವಿಡ್ ನಂತರ ಕಾಣಿಸಿಕೊಳ್ಳುವ ರೋಗ ಲಕ್ಷಣವಾಗಿದೆ. ಕೊರೊನಾದಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಆಂಟಿ ಬಾಡಿ ಉತ್ಪಾದನೆ ಆಗುತ್ತದೆ. ಈ ಆಂಟಿಬಾಡಿಗಳು ವೈರಾಣುಗಳನ್ನ ಸಾಯಿಸುವ ಬದಲು ದೇಹದ ಕೋಶಗಳನ್ನೇ ಕೊಲ್ಲಲು ಆರಂಭಿಸುತ್ತವೆ. ಇದರಿಂದಾಗಿ ಮಕ್ಕಳ ದೇಹದ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಹೃದಯ, ಮೆದುಳು, ಕಿಡ್ನಿ, ಹೊಟ್ಟೆ, ಚರ್ಮದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡೋದಿಲ್ಲ. ಮಕ್ಕಳಲ್ಲಿ ಚರ್ಮದಲ್ಲಿ ರಕ್ತ ಹೆಪ್ಪುಗಟ್ಟಿದೆ ಅಂದ ತಕ್ಷಣ ಆಸ್ಪತ್ರೆಗೆ ಕರೆತನ್ನಿ. ಅವರಿಗೆ ಸಿಡುಬು ಆಗಿರಬಹುದು ಎಂದು ಮನೆಯಲ್ಲೇ ಇಟ್ಟು ನಿರ್ಲಕ್ಷ್ಯ ಮಾಡಬೇಡಿ. ಸರ್ಕಾರದಿಂದ ಎಂಐಎಸ್ಸಿಗೆ ಉಚಿತ ಚಿಕಿತ್ಸೆ ನೀಡಲಾಗ್ತಿದೆ ಎಂದು ಡಾ. ಸುಧಾ ರುದ್ರಪ್ಪ ಮಾಹಿತಿ ನೀಡಿದ್ರು.