ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ಕ್ರಮೇಣವಾಗಿ ಇಳಿಕೆಯಾಗುತ್ತಿದೆ. ಆದರೆ ಇದರ ನಡುವೆಯೇ ಮೂರನೇ ಅಲೆಯ ಭಯ ಕೂಡ ಹುಟ್ಟಿಕೊಂಡಿದೆ. ಕೊರೊನಾ ಮೂರನೆ ಅಲೆಯಲ್ಲಿ ಮಕ್ಕಳಿಗೆ ಡೇಂಜರ್ ಕಾದಿದೆ ಎಂಬ ಆತಂಕದ ನಡುವೆಯೂ ಶಾಲೆಗಳ ಪುನಾರಂಭಕ್ಕೆ ಡಾ.ದೇವಿ ಶೆಟ್ಟಿ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜ್ಯ ಸರ್ಕಾರಕ್ಕೆ ಡಾ. ದೇವಿ ಶೆಟ್ಟಿ ಸಮಿತಿ ನೀಡಿರುವ ಸಲಹೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್ ಶಾಲೆ ಆರಂಭ ಮಾಡೋದು ಅನ್ನೋದು ತುಂಬಾನೇ ಸೂಕ್ಷ್ಮದ ವಿಚಾರ. ಒಮ್ಮೆ ಶಾಲೆಯನ್ನ ಆರಂಭ ಮಾಡಿಬಿಟ್ಟರೆ ಮತ್ತೆ ನಿಲ್ಲಿಸೋದು ಅಷ್ಟು ಸುಲಭವಲ್ಲ. ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಡಾ. ದೇವಿ ಶೆಟ್ಟಿ ಸಮಿತಿ ನೀಡಿರುವ ಸಲಹೆಯ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ತೇವೆ ಎಂದು ಹೇಳಿದ್ರು.
ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಬಂದ್ ಆಗಿರುವ ಶಾಲೆ ಹಾಗೂ ಕಾಲೇಜುಗಳನ್ನ ಪುನಾರಂಭಿಸಲು ಡಾ. ದೇವಿಶೆಟ್ಟಿ ಸಮಿತಿ ಸಲಹೆ ನೀಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಹಂತಹಂತವಾಗಿ ಶಾಲಾ – ಕಾಲೇಜುಗಳನ್ನ ಆರಂಭಿಸಬಹುದು. ಮೊದಲ ಹಂತದಲ್ಲಿ ಕಾಲೇಜು, ಎರಡನೇ ಹಂತದಲ್ಲಿ ಪ್ರೌಢಶಾಲೆ ಹಾಗೂ ಮೂರನೇ ಹಂತದಲ್ಲಿ 3 ರಿಂದ 7ನೇ ತರಗತಿ ಇದೇ ರೀತಿ ಮುಂದುವರಿಸುತ್ತಾ ಹೋಗಬಹುದು.
ಪ್ರತಿ ದಿನ ಶಾಲೆ ಹಾಗೂ ಕಾಲೇಜುಗಳನ್ನ ತೆರೆಯಲು ಸಾಧ್ಯವಾಗದೇ ಇದ್ದಲ್ಲಿ ದಿನ ಬಿಟ್ಟು ದಿನ ಇಲ್ಲವೇ ಪಾಳಿ ಪ್ರಕಾರ ತರಗತಿಗಳನ್ನ ನಡೆಸಬಹುದಾಗಿದೆ. ಶಾಲೆಗಳನ್ನ ತೆರೆಯಬೇಕೋ ಬೇಡವೋ ಎಂಬ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನ ಸ್ಥಳೀಯ ಅಧಿಕಾರಿಗಳಿಗೆ ನೀಡಿ. ಸ್ಕೂಲ್ ಬಸ್ನ ಚಾಲಕರಿಗೂ ಕೊರೊನಾ ಲಸಿಕೆಯನ್ನ ನೀಡಿ. ಶಾಲೆಗಳನ್ನ ಆರಂಭಿಸೋದ್ರಿಂದ ಲಾಭ ಹಾಗೂ ನಷ್ಟ ಎರಡೂ ಕಾದಿದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಿ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡಿ ಎಂಬಿತ್ಯಾದಿ ಸಲಹೆಗಳನ್ನ ಡಾ. ದೇವಿ ಶೆಟ್ಟಿ ಸಮಿತಿ ಸರ್ಕಾರಕ್ಕೆ ನೀಡಿದೆ.