ನವದೆಹಲಿ: ದೇಶಾದ್ಯಂತ ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು, ವೆಲ್ಡನ್ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ ದಾಖಲೆಯ 75 ಲಕ್ಷಕ್ಕೂ ಅಧಿಕ ಮಂದಿಗೆ ನೀಡಲಾಗಿದೆ. ವ್ಯಾಕ್ಸಿನೇಷನ್ ಗಾಗಿ ಪರಿಷ್ಕೃತ ಮಾರ್ಗಸೂಚಿಗಳೊಂದಿಗೆ ಇಂದು ಕಿಕ್ ಸ್ಟಾರ್ಟ್ ಆಗಿದ್ದು, ಸಂಜೆಯವರೆಗೆ ಇಷ್ಟೊಂದು ಸಂಖ್ಯೆಯ ಜನರಿಗೆ ಲಸಿಕೆ ನೀಡಲಾಗಿದೆ.
ಜನವರಿ 16 ರಂದು ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿಗೆ ಅಂದರೆ ಏಪ್ರಿಲ್ 1 ರಂದು 48 ಲಕ್ಷ ಜನರಿಗೆ ನೀಡಲಾಗಿತ್ತು. ಇವತ್ತು ಒಂದೇ ದಿನ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು, ಕೊರೋನಾ ವಿರುದ್ಧದ ಹೋರಾಟಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ 2 ನೇ ಸ್ಥಾನ:
ಇನ್ನು ಲಸಿಕೆ ಮಹಾ ಅಭಿಯಾನದಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇಂದು ಸಂಜೆ 7 ಗಂಟೆಯವರೆಗೆ ರಾಜ್ಯದಲ್ಲಿ 10.36 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಇದುವರೆಗೆ 1.96 ಕೋಟಿ ಜನರಿಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಇಂದು 14,71,936 ಜನರಿಗೆ ಲಸಿಕೆ ನೀಡಲಾಗಿದ್ದು, ಕರ್ನಾಟಕದಲ್ಲಿ 10,36,523 ಹಾಗೂ ಉತ್ತರ ಪ್ರದೇಶದಲ್ಲಿ 6,57,689 ಜನರಿಗೆ ಲಸಿಕೆ ನೀಡಲಾಗಿದೆ.