ಕೊರೊನಾ ರೋಗಿಗಳಿಗೆ ನೆರವಾಗಲು ಅನೇಕ ರಾಜ್ಯಗಳಲ್ಲಿ ಕೊರೊನಾ ಹೆಲ್ಪ್ ಲೈನ್ ತೆರೆಯಲಾಗಿದೆ. ದೆಹಲಿ-ಎನ್ಸಿಆರ್ ನಲ್ಲಿ ಕೊರೊನಾ ರೋಗಿಗಳಿಗಾಗಿ ತೆರೆಯಲಾಗಿರುವ ಸಹಾಯ ವಾಣಿಗೆ ಕೊರೊನಾ ರೋಗಿಗಳಿಗಿಂತ ಕೊರೊನಾ ರೋಗದಿಂದ ಗುಣಮುಖರಾದವರ ಕರೆ ಹೆಚ್ಚು ಬರ್ತಿದೆಯಂತೆ.
ಪ್ರತಿ ದಿನ 1600ಕ್ಕೂ ಹೆಚ್ಚು ಕರೆಗಳು ಬರ್ತಿವೆ. ಅದ್ರಲ್ಲಿ ಶೇಕಡಾ 10ರಷ್ಟು ಕರೆ ಕೊರೊನಾ ರೋಗಿಗಳಾಗಿದ್ದರೆ ಉಳಿದ ಶೇಕಡಾ 90ರಷ್ಟು ಕರೆ ಕೊರೊನಾದಿಂದ ಚೇತರಿಕೆ ಕಂಡವರಿಂದ ಬರುತ್ತಿದೆ ಎಂದು ವೈದ್ಯರ ಹೇಳಿದ್ದಾರೆ. ಗಂಭೀರ ಸೋಂಕಿನಿಂದ ಹೊರ ಬಂದ ರೋಗಿಗಳು ಈಗ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ಬೇರೆ ಆರೋಗ್ಯ ಸಮಸ್ಯೆ ಅವರನ್ನು ಕಾಡ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾಗೆ ಸಂಬಂಧಿಸಿದಂತೆ ಬರ್ತಿರುವ ಕರೆ ಕಡಿಮೆಯಾಗಿಲ್ಲ. ಜನರು ತಮ್ಮ ಸಮಸ್ಯೆ ಜೊತೆ ಲಸಿಕೆ ಬಗ್ಗೆ ಮಾಹಿತಿ ಕೇಳ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಕೊರೊನಾ ನಂತರ ದೇಹದಲ್ಲಿ ಹೆಚ್ಚಿರುವ ಸಕ್ಕರೆ ಪ್ರಮಾಣ, ನಿದ್ರಾಹೀನತೆ, ಹಸಿವಿನ ಕೊರತೆ, ದೇಹದಲ್ಲಿ ದದ್ದುಗಳು, ಉಸಿರುಗಟ್ಟುವಿಕೆ ಅಥವಾ ಆಸ್ತಮಾದ ದೂರುಗಳು, ಆಯಾಸ, ನೋವಿನ ಸಮಸ್ಯೆ ವರದಿಯಾಗ್ತಿದೆ. ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ಕುಳಿತಾಗ ಕಣ್ಣು ಭಾರವಾಗ್ತಿದೆ ಎಂದು ಸಮಸ್ಯೆ ಹೇಳಿಕೊಳ್ತಿದ್ದಾರಂತೆ.