ಅಜ್ಮೀರ್: ರಾಜಸ್ಥಾನದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಭಿನೈ ಏಕಸಿಂಘಾದಲ್ಲಿರುವ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲ ವಾಟ್ಸಾಪ್ ನಲ್ಲಿ ಅನುಚಿತ ಸಂದೇಶ ಕಳುಹಿಸಿರುವುದಾಗಿ ಆರೋಪಿಸಿದ್ದಾರೆ.
ಈ ರೀತಿ ಸಂದೇಶ ಕಳುಹಿಸಿರುವ ವ್ಯಕ್ತಿಯನ್ನು ದೇವೇಂದ್ರಕುಮಾರ ಸಂಕಾಲಾ ಎಂದು ಗುರುತಿಸಲಾಗಿದೆ. ದೂರು ನೀಡಿದ ನಂತರ ಶಿಕ್ಷಕಿಗೆ ಆರೋಪಿ ಬೆದರಿಕೆ ಹಾಕಿದ್ದಾನೆ. 5 ತಿಂಗಳ ಹಿಂದೆ ಶಿಕ್ಷಕಿಯನ್ನು ಎಕಲಸಿಂಗ್ನ ಮಾಧ್ಯಮಿಕ ಶಾಲೆಗೆ ನಿಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಸಂಕಾಲಾ ಅವರು ವಾಟ್ಸಾಪ್ ನಲ್ಲಿ ದೂರುದಾರರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.
ಜೂನ್ 4 ರಂದು ಶಿಕ್ಷಕನೊಬ್ಬನನ್ನು ಶಿಕ್ಷಕಿ ಕೆಲಸ ಮಾಡುತ್ತಿದ್ದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ, ಶಿಕ್ಷಕಿಯನ್ನು ತನ್ನ ಶಾಲೆಗೆ ಸಂಕಾಲಾ ನಿಯೋಜಿಸುತ್ತಾನೆ. ಗರ್ಭಿಣಿಯಾಗಿದ್ದರಿಂದ ಆ ಶಾಲೆಗೆ ಹೋಗಿ ಕೆಲಸ ಮಾಡಲು ಶಿಕ್ಷಕಿ ನಿರಾಕರಿಸಿದ್ದಾರೆ. ಶಿಕ್ಷಕಿಯ ದೈಹಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರಾಂಶುಪಾಲ ಆಕೆಗೆ ನೋಟಿಸ್ ನೀಡಿ, ಕರ್ತವ್ಯಕ್ಕೆ ಬರಲು ಸೂಚಿಸಿದ್ದಾನೆ. ಅಂತಿಮವಾಗಿ ಆತನ ಒತ್ತಡ ಜಾಸ್ತಿಯಾದಾಗ ಶಿಕ್ಷಕಿ ಕೆಲಸ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಭಿನೈ ಪೊಲೀಸರು ಸಂಕಾಲಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಕರಣದ ತನಿಖೆಗಾಗಿ ನೇಮಕವಾಗಿರುವ ಎಎಸ್ಐ ಅಹ್ಮದ್ ಖಾತಾತ್ ಹೇಳಿದ್ದಾರೆ. ಠಾಣೆಗೆ ಆರೋಪಿಯನ್ನು ಕರೆಸಿದ್ದ ಸಂದರ್ಭದಲ್ಲಿ ದೂರು ನೀಡಿದ ಶಿಕ್ಷಕಿಗೆ ಬೆದರಿಕೆ ಹಾಕಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.