ಬೆಂಗಳೂರು: ಮಂಗಳಮುಖಿಯರಿಗೆ ಉದ್ಯೋಗದಲ್ಲಿ ಶೇಕಡ 1 ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಂಗಳಮುಖಿಯರಿಗೆ ಶೇಕಡ 1 ರಷ್ಟು ಮೀಸಲಾತಿ ನೀಡುವ ಸಂಬಂಧ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್ ಗೆ ಸರ್ಕಾರ ತಿಳಿಸಿದೆ.
ಲೈಂಗಿಕ ಅಲ್ಪಸಂಖ್ಯಾತರು, ಹೆಚ್ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದೆ.
ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ವಿಜಯಕುಮಾರ ಪಾಟೀಲ ವಾದ ಮಂಡಿಸಿ, ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಂಗಳಮುಖಿಯರಿಗೆ ಶೇಕಡ 1 ರಷ್ಟು ಮೀಸಲಾತಿ ನೀಡಲು ಕರ್ನಾಟಕ ನಾಗರೀಕ ಸೇವಾ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಸೇರ್ಪಡೆ ಮಾಡಲಾಗುವುದು. ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ಆಕ್ಷೇಪಣೆಯ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕೆ ಕಾಲಾವಕಾಶ ಬೇಕಿದೆ ಎಂದು ಹೇಳಿದ್ದಾರೆ.