ವಾಷಿಂಗ್ಟನ್: ಫಿಜರ್, ಮಾಡೆರ್ನಾ ಕೋವಿಡ್ -19 ಲಸಿಕೆಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಯುಎಸ್ ನಲ್ಲಿ ನಡೆಸಿದ ಅಧ್ಯಯನದಲ್ಲಿ ಎರಡು ಡೋಸ್ ಫಿಜರ್ ಮತ್ತು ಮಾಡೆರ್ನಾ ಕೋವಿಡ್ -19 ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಪುರುಷರ ಫಲವತ್ತತೆ ಮತ್ತು ವೀರ್ಯಾಣುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದು ಬಂದಿದೆ. ಫಿಜರ್ ಮತ್ತು ಮಾಡೆರ್ನಾ ಕೋವಿಡ್ -19 ಲಸಿಕೆಗಳು ಪುರುಷ ಫಲವತ್ತತೆಗೆ ಹಾನಿ ಮಾಡುವುದಿಲ್ಲ, ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ವೀರ್ಯದ ಮಟ್ಟವು ಆರೋಗ್ಯಕರ ಪ್ರಮಾಣದಲ್ಲಿಯೇ ಉಳಿದಿದೆ ಎಂದು ಹೇಳಲಾಗಿದೆ.
JAMA ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿ ಅನುಸಾರ, 18 ರಿಂದ 50 ವರ್ಷ ವಯಸ್ಸಿನ 45 ಆರೋಗ್ಯವಂತ ಪುರುಷ ಸ್ವಯಂಸೇವಕರನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ಭಾಗವಹಿಸಿದ್ದವರಿಗೆ ಯಾವುದೇ ಫಲವತ್ತತೆ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಕೂಡ ನಡೆಸಲಾಗಿದೆ.
ಲಸಿಕೆ ಮೊದಲ ಡೋಸ್ ಸ್ವೀಕರಿಸುವ ಮೊದಲು ಮತ್ತು ಎರಡನೆಯ ಡೋಸ್ ಪಡೆದ ನಂತರ ಸುಮಾರು 70 ದಿನಗಳ ನಂತರ ಪುರುಷರು ಇಂದ್ರಿಯನಿಗ್ರಹದ ನಂತರ ವೀರ್ಯದ ಮಾದರಿಯನ್ನು ಒದಗಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ತರಬೇತಿ ಪಡೆದ ಆಂಡ್ರಾಲಜಿಸ್ಟ್‌ಗಳಿಂದ ವೀರ್ಯ ವಿಶ್ಲೇಷಣೆ ನಡೆಸಲಾಗಿದೆ. ವೀರ್ಯದ ಪ್ರಮಾಣ, ವೀರ್ಯ ಸಾಂದ್ರತೆ, ವೀರ್ಯ ಚಲನಶೀಲತೆ ಮತ್ತು ಒಟ್ಟು ಮೋಟೈಲ್ ವೀರ್ಯಾಣುಗಳ ಸಂಖ್ಯೆ(ಟಿಎಂಎಸ್‌ಸಿ)ಯನ್ನು ಇದು ಒಳಗೊಂಡಿದೆ.
ಯುಎಸ್ ನ ಮಿಯಾಮಿ ವಿಶ್ವವಿದ್ಯಾಲಯದ ಅಧ್ಯಯನದ ಲೇಖಕರು ಗಮನಿಸಿರುವಂತೆ, ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಕೂಡ ಲಸಿಕೆ ಪಡೆಯಲು ಹಿಂಜರಿಕೆಗೆ ಒಂದು ಕಾರಣವೆನ್ನಲಾಗಿದೆ.
ಲಸಿಕೆಯ ಎರಡು ಡೋಸ್ ಗಳ ಮೊದಲು ಮತ್ತು ನಂತರ ವೀರ್ಯ ನಿಯತಾಂಕಗಳ ಅಧ್ಯಯನದಲ್ಲಿ, ಆರೋಗ್ಯವಂತ ಪುರುಷರಲ್ಲಿ ಯಾವುದೇ ಗಮನಾರ್ಹ ಇಳಿಕೆ ಕಂಡುಬಂದಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಅಧ್ಯಯನದ ಆರಂಭದಲ್ಲಿ ವೀರ್ಯಾಣು ಸಾಂದ್ರತೆ ಮತ್ತು ಒಟ್ಟು ಮೋಟೈಲ್ ವೀರ್ಯಾಣುಗಳ ಸಂಖ್ಯೆ ಕ್ರಮವಾಗಿ 26 ಮಿಲಿಯನ್ / ಮಿಲಿಲೀಟರ್ (ಎಂಎಲ್) ಮತ್ತು 36 ಮಿಲಿಯನ್.
ಲಸಿಕೆ ಎರಡನೇ ಡೋಸ್ ನಂತರ, ಸರಾಸರಿ ವೀರ್ಯಾಣು ಸಾಂದ್ರತೆಯು ಗಮನಾರ್ಹವಾಗಿ 30 ಮಿಲಿಯನ್ / ಎಂಎಲ್ ಮತ್ತು ಸರಾಸರಿ ಟಿಎಂಎಸ್ಸಿ 44 ಮಿಲಿಯನ್ ಗೆ ಏರಿದೆ.
ವೀರ್ಯದ ಪ್ರಮಾಣ ಮತ್ತು ವೀರ್ಯ ಚಲನಶೀಲತೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವೀರ್ಯ ನಿಯತಾಂಕಗಳ ಮೇಲೆ ಲಸಿಕೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ವೀರ್ಯ ವಿಶ್ಲೇಷಣೆಯು ಪುರುಷ ಫಲವತ್ತತೆ ಮೌಲ್ಯಮಾಪನದ ಅಡಿಪಾಯವಾಗಿದ್ದರೂ, ಇದು ಫಲವತ್ತತೆ ಸಾಮರ್ಥ್ಯದ ಅಪೂರ್ಣ ಮುನ್ಸೂಚಕವಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ.