ಪ್ರೀತಿಯಿಂದ ಸಾಕಿದ ಶ್ವಾನ ಕಳೆದು ಹೋಯ್ತು ಅಂದರೆ ಸಾಕು ಆಕಾಶವೇ ಕಳಚಿಬಿದ್ದಂತೆ ಆಗುತ್ತೆ. ಹಾರ್ಲೆ ಎಂಬ ಆರು ವರ್ಷದ ಶ್ವಾನ ಕೂಡ ತನ್ನ ಮಾಲೀಕನ ಕೈನಿಂದ ತಪ್ಪಿಸಿಕೊಂಡಿತ್ತು. ಆದರೆ ಬಳಿಕ ಈ ಶ್ವಾನವನ್ನ ತಾನು ಹೇಗೆ ಪತ್ತೆ ಮಾಡಿದೆ ಹಾಗೂ ಅದು ಯಾರ ಜೊತೆ ಎಂಜಾಯ್ ಮಾಡ್ತಿತ್ತು ಎಂಬ ವಿವರವನ್ನ ಮಾಲೀಕ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು ಈ ಪೋಸ್ಟ್ ವೈರಲ್ ಆಗಿದೆ.
ವರ್ಜಿನಿಯಾ ನಿವಾಸಿಯಾದ ರಾಲ್ಫ್ ಡಾರ್ನ್ ಎಂಬವರು ನಾಯಿ ಕಳೆದುಹೋಗಿದೆ ಎಂದು ಆತಂಕಕ್ಕೀಡಾಗಿದ್ದರು. ಊರೆಲ್ಲ ಹುಡುಕಿ ಸುಸ್ತಾಗಿದ್ದ ರಾಲ್ಫ್ಗೆ ತನ್ನ ಶ್ವಾನ ಮನೆಯ ಸಮೀಪದಲ್ಲೇ ಇದ್ದ ನದಿಯೊಂದರಲ್ಲಿ ಪತ್ತೆಯಾಗಿದೆ. ವಿಶೇಷ ಅಂದರೆ ಈ ಶ್ವಾನವು ಪುಟಾಣಿ ಜಿಂಕೆಯ ಜೊತೆ ಈಜಾಡುತ್ತಿತ್ತು.ಈ ಅದ್ಭುತ ದೃಶ್ಯದ ಫೋಟೊಗಳನ್ನ ರಾಲ್ಫ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ನದಿಯಿಂದ ಹೊರ ಬಂದ ಬಳಿಕ ಹಾರ್ಲೆ, ಮರಿ ಜಿಂಕೆಯ ಮೈಯನ್ನ ನೆಕ್ಕುವ ಮೂಲಕ ತನ್ನ ಪ್ರೀತಿಯನ್ನ ವ್ಯಕ್ತಪಡಿಸಿದೆ.
ಈ ಘಟನೆ ನಡೆದು ಕೆಲವು ದಿನಗಳ ಬಳಿಕ ಹಾರ್ಲೆ ತುಂಬಾನೇ ಗಲಾಟೆ ಮಾಡುತ್ತಿತ್ತು. ಮನೆಯಿಂದ ಹೊರಹೋಗಲು ಹಾರ್ಲೆ ಹಪಹಪಿಸುತ್ತಿರೋದನ್ನ ಗಮನಿಸಿದ ರಾಲ್ಫ್ ಬಾಗಿಲನ್ನ ತೆರೆದಿದ್ದಾರೆ. ಕೂಡಲೇ ಹಾರ್ಲೆ ಅಲ್ಲೇ ಇದ್ದ ಮರಿ ಜಿಂಕೆಯ ಬಳಿ ಓಡಿ ಹೋಗಿದೆ. ಕೂಡಲೇ ಒಬ್ಬರಿಗೊಬ್ಬರು ಮೂಗುಗಳನ್ನ ನೆಕ್ಕಿಕೊಂಡರು ಹಾಗೂ ಇದಾದ ಬಳಿಕ ಹಾರ್ಲೆ ಶಾಂತ ರೀತಿಯಲ್ಲಿ ಮನೆಗೆ ವಾಪಸ್ಸಾಯ್ತು ಎಂದು ರಾಲ್ಪ್ ಬರೆದುಕೊಂಡಿದ್ದಾರೆ.