ಬೆಂಗಳೂರು: ಸರ್ಕಾರ ಜನರದ್ದು, ಯಾವುದೇ ಕುಟುಂಬಕ್ಕೆ ಸೇರಿಲ್ಲ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎಂಬ ಪಕ್ಷದ ಸಿದ್ಧಾಂತವನ್ನು ಪಾಲಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮೊದಲಿದ್ದ ಶಕ್ತಿ ಈಗ ಇಲ್ಲವಾಗಿದೆ. ಅವರ ಕುಟುಂಬದವರ ಹಸ್ತಕ್ಷೇಪವಿಲ್ಲ ಎನ್ನುವುದನ್ನು ನಾನು ಹೇಳುತ್ತಿಲ್ಲ, ಸಚಿವರೇ ಹೇಳುತ್ತಿದ್ದಾರೆ. ರಾಜ್ಯದ ಜನತೆಗೆ ಗೊತ್ತಿದೆ ಎಂದು ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಆತಂಕ ನಮ್ಮದು. ವಿಧಾನಸೌಧ ಶಕ್ತಿಪೀಠ ಮಸುಕಾಗುತ್ತಿದೆ. ನಾಯಕತ್ವ ಕುಸಿಯುತ್ತಿದೆ. ಅವರಿಂದ ಪ್ರಯೋಜನ ಇಲ್ಲವಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲಾ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇಂತಹ ನಾಯಕತ್ವದಿಂದ ಪ್ರಯೋಜನವಿಲ್ಲ. ಯಡಿಯೂರಪ್ಪ ಅವರನ್ನು ಗೌರವಿಸಿ ಸಿಎಂ ಮಾಡಿದ್ದೇವೆ. ನಮ್ಮ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಈಗ ಸಮರ್ಪಕವಾದ ನಾಯಕತ್ವ ಬೇಕಿದೆ. ಈಶ್ವರಪ್ಪ ರಾಜ್ಯಪಾಲರ ಬಳಿಗೆ ಹೋಗಿದ್ದು ಏಕೆ? ನೀರಾವರಿ ಇಲಾಖೆಯಲ್ಲಿ ತರಾತುರಿಯಲ್ಲಿ 20 ಸಾವಿರ ಕೋಟಿ ಟೆಂಡರ್ ಕರೆಯಲಾಗಿದೆ. ಪಕ್ಷಕ್ಕೆ ಹಾನಿಯಾಗುತ್ತದೆ. ಇದೆಲ್ಲವುದರ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ.