ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ ನಲ್ಲಿ ಇಂದು ಆರಂಭವಾಗಲಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲುವಿಗೆ ಭಾರತ ತಂಡ ಕಾರ್ಯತಂತ್ರ ರೂಪಿಸಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ 2 ನೇ ಸ್ಥಾನದಲ್ಲಿದೆ. 59 ಸಲ ಉಭಯ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 12 ಬಾರಿ ಜಯಗಳಿಸಿದೆ. 21 ಪಂದ್ಯಗಳನ್ನು ಭಾರತ ಜಯಗಳಿಸಿದ್ದು, 26 ಪಂದ್ಯಗಳು ಡ್ರಾ ಆಗಿವೆ.
ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಣಾಹಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 1 -0 ಅಂತರದಿಂದ ನ್ಯೂಜಿಲೆಂಡ್ ಜಯಗಳಿಸಿದೆ. ಕ್ವಾರಂಟೈನ್ ಅವಧಿಯಲ್ಲಿ ಕಠಿಣ ತಾಲೀಮು ನಡೆಸಿ ಸಜ್ಜಾಗಿರುವ ಟೀಂ ಇಂಡಿಯಾ ಗೆಲುವನ್ನು ಎದುರು ನೋಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ನಡುವೆಯೂ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ನೇತೃತ್ವದ ತಂಡಗಳು ಹಲವು ಟೆಸ್ಟ್ ಪಂದ್ಯಗಳಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿವೆ.