ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ‘ಒನ್ ನೇಷನ್ ಒನ್ ಪಿಯುಸಿ’ ಯೋಜನೆ ಜಾರಿಗೆ ಮುಂದಾಗಿದ್ದು, ದೇಶಾದ್ಯಂತ ವಾಹನ ಮಾಲಿನ್ಯ ಪ್ರಮಾಣ ಪತ್ರವನ್ನು ಏಕರೂಪಗೊಳಿಸಲಾಗುವುದು.
ಎಲ್ಲ ವಾಹನಗಳಿಗೆ ಒಂದೇ ರೀತಿಯ ಪಿಯುಸಿ(Pollution Under Control) ಸರ್ಟಿಫಿಕೇಟ್ ಬಳಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಸ್ತಿತ್ವದಲ್ಲಿರುವ ವಾಹನಗಳ ಅವಧಿ ಮುಗಿದಿಲ್ಲವಾದರೆ ಒಂದೇ ವಾಹನಕ್ಕಾಗಿ ದೇಶದ ವಿವಿಧ ಸ್ಥಳಗಳಲ್ಲಿ ಹೊಸ ಪಿಯುಸಿ ಪಡೆಯುವ ಅಗತ್ಯವನ್ನು ಸರ್ಕಾರ ದೂರ ಮಾಡಿದೆ.
ವಾಹನಗಳ ಪಿಯುಸಿ ಪ್ರಮಾಣಪತ್ರವನ್ನು ಪಿಯುಸಿ ಡೇಟಾಬೇಸ್ ರಾಷ್ಟ್ರೀಯ ರಿಜಿಸ್ಟರ್ ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಪಿಯುಸಿ ಹೊಸ ರೂಪದಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ವಾಹನ ಮಾಲೀಕರು ವಿವರಗಳಲ್ಲದೆ ಹೊಸ ಪಿಯುಸಿಯಲ್ಲಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆ, ಹೆಸರು, ವಿಳಾಸ, ಇಂಜಿನ್ ಸಂಖ್ಯೆ, ಚಾಸಿಸ್ ನಂಬರ್ ಕೂಡ ಇರಲಿದೆ. ಡೇಟಾಬೇಸ್ ನಿಂದ ನಿರ್ದಿಷ್ಟ ವಾಹನದ ಬಗ್ಗೆ ವಿವರಗಳನ್ನು ಪಡೆಯಲು ಸುಲಭವಾಗಲಿದೆ.
ಕೇಂದ್ರ ಸಾರಿಗೆ ವಾಹನ ನಿಯಮಗಳು -1989 ರ ಅಡಿಯಲ್ಲಿ ದೇಶಾದ್ಯಂತ ಪಿಯುಸಿ ಪ್ರಮಾಣಪತ್ರದ ಸಾಮಾನ್ಯ ಸ್ವರೂಪವನ್ನು ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021 ಜೂನ್ 14 ರಂದು ಅಧಿಸೂಚನೆ ಹೊರಡಿಸಿದೆ. ಮಾಲೀಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.