ಕೋವಿಡ್-19 ಸೋಂಕಿನ ಚಿಕಿತ್ಸೆ ವಿಚಾರದಲ್ಲಿ ಅಲೋಪಥಿ ಮದ್ದುಗಳ ಬಗ್ಗೆ ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಛತ್ತೀಸ್‌ಘಡದ ರಾಯ್ಪುರ ಪೊಲೀಸರಿಂದ ಎಫ್‌ಐಆರ್ ದಾಖಲಾಗಿದೆ.
ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಛತ್ತೀಸ್‌ಘಡದ ಘಟಕ ರಾಮ್‌ದೇವ್ ವಿರುದ್ಧ ಸಲ್ಲಿಸಿದ್ದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ.
ರಾಮ್‌ದೇವ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ, 2005 ಹಾಗೂ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಹೊರಡಿಸಲ್ಪಡ್ಡ ಆದೇಶಕ್ಕೆ ಅಗೌರವ ತೋರುವುದು), 269 (ಜೀವಕ್ಕೆ ಅಪಾಯಕಾರಿಯಾಗಬಲ್ಲ ರೀತಿಯಲ್ಲಿ ಸೋಂಕು ಹಬ್ಬುವುದು), 504 (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರಿತವಾಗಿ ಅವಮಾನ ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.
ಕೊರೋನಾ ವೈರಸ್ ಸೋಂಕಿನ ವಿರುದ್ಧ ಚಿಕಿತ್ಸೆ ನೀಡಲು ಭಾರತ ಸರ್ಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಹಾಗೂ ಇತರೆ ಮುಂಚೂಣಿ ಸಂಸ್ಥೆಗಳು ಕೋವಿಡ್ ಚಿಕಿತ್ಸೆಗೆಂದು ಸೂಚಿಸಿರುವ ಮದ್ದುಗಳು ಬಗ್ಗೆ ಕಳೆದ ಒಂದು ವರ್ಷದಿಂದ ರಾಮ್‌ದೇವ್ ತಪ್ಪು ಮಾಹಿತಿ ರವಾನೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.