ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯುವ ವಿಚಾರದಲ್ಲಿ ವಿರೋಧಿ ಬಣದಿಂದ ಅಪಸ್ವರ ಕೇಳಿ ಬರ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭಿನ್ನಮತ ಶಮನಕ್ಕಾಗಿ ಅಖಾಡಕ್ಕೆ ಇಳಿದಿದ್ದು ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಿದ್ದಾರೆ. ಆದರೆ ಸಭೆಯಲ್ಲಿ ಭಾಗಿಯಾಗಬೇಕಿದ್ದ ಶಾಸಕರಲ್ಲಿ ಭಿನ್ನಮತ ಶಮನಕ್ಕಿಂತ ಹೆಚ್ಚಾಗಿ ಸ್ಪೋಟಕ ಹೇಳಿಕೆಗಳೇ ಹೊರಬರ್ತಿದೆ.
ರಾಜ್ಯ ರಾಜಕಾರಣದಲ್ಲಿ ಏರುಪೇರು ಉಂಟಾಗುವ ವೇಳೆಯಲ್ಲಿಯೇ ದೆಹಲಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪ ಮಾಡಿದ್ದಾರೆ. ಕುಮಾರಕೃಪಾ ಗೆಸ್ಟ್ಹೌಸ್ ಬಳಿ ಮಾತನಾಡಿದ ಅವರು ಕಳೆದೊಂದು ತಿಂಗಳಿನಿಂದ ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆ ಸ್ಫೋಟಕ ಹೇಳಿಕೆಯನ್ನ ಅವರು ನೀಡಿದ್ದಾರೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನನಗೇಕೋ ಈ ಕರೆ ಸರಿ ಎನಿಸದ ಕಾರಣ ನಾನು ಕರೆಯನ್ನ ಕಟ್ ಮಾಡಿದೆ.
ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ನನ್ನ ಮೊಬೈಲ್ಗೆ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ ನನ್ನನ್ನ ಜೈಲಿಗೆ ಹಾಕಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ. ಹೇಗೋ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ ಎಂದೆಲ್ಲ ಹೇಳಿದ್ರು. ನನಗೇಕೋ ಈ ಕರೆಯ ಮೇಲೆ ನಂಬಿಕೆ ಬಾರದ ಕಾರಣ ಚರ್ಚೆಯನ್ನ ಅಲ್ಲಿಗೇ ನಿಲ್ಲಿಸಿದೆ.
ಆದರೆ ಈ ಕರೆಯ ಹಿಂದೆ ನನ್ನ ವಿರುದ್ಧ ಪಿತೂರಿ ನಡೆಸುವ ಉದ್ದೇಶ ಇದೆ ಅನ್ನೋದು ನನಗೆ ಬಹಳ ಸ್ಪಷ್ಟವಾಗಿ ಎನಿಸುತ್ತಿದೆ. ನನ್ನ ತಂದೆ ಚಂದ್ರಕಾಂತ್ ಬೆಲ್ಲದ್ ಐದು ಬಾರಿ ಶಾಸಕರಾಗಿದ್ದವರು. ನನ್ನ ತಂದೆ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದ ರಾಜಕಾರಣ ನಡೆಸಿದ್ದಾರೆ. ನಾನು ಕೂಡ ನನ್ನ ತಂದೆಯ ಹಾದಿಯಲ್ಲಿಯೇ ಪ್ರಾಮಾಣಿಕ ರಾಜಕಾರಣ ನಡೆಸಿಕೊಂಡು ಹೋಗುತ್ತಿದ್ದೇನೆ. ಆದರೆ ನನ್ನ ಈ ಪ್ರಾಮಾಣಿಕ ರಾಜಕಾರಣಕ್ಕೆ ಭಂಗ ತರಲು ಯಾರೋ ಪಿತೂರಿ ನಡೆಸಿದ್ದಾರೆ ಎಂಬ ಅನುಮಾನ ನನಗೆ ಶುರುವಾಗಿದೆ. ನಾನು ಯಾರ ವಿರುದ್ಧವೂ ಹೇಳಿಕೆ ನೀಡಿದವನಲ್ಲ. ನನ್ನ ಪಾಡಿಗೆ ಜನರ ಸೇವೆಯನ್ನ ಮಾಡುತ್ತಾ ಬಂದವನು. ನನ್ನನ್ನ ಬೇರೆ ಯಾವುದೇ ಮಾರ್ಗದಲ್ಲಿ ಸಿಕ್ಕಿಸಲು ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಈ ರೀತಿ ಮಾಡ್ತಿದ್ದಾರೆ ಎಂದು ನನಗನಿಸುತ್ತಿದ್ದೆ ಎಂದು ಹೇಳಿದ್ದಾರೆ.