ಚೆನ್ನೈ: ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಹಿಳೆ ರೋಗಿ ನಾಪತ್ತೆಯಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ.
ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 41 ವರ್ಷದ ಸುಮಿತಾ ಮೇ 23 ರಂದು ಏಕಾಏಕಿ ನಾಪತ್ತೆಯಾಗಿದ್ದರು. ಮೇ 31 ರಂದು ಅವರ ಪತಿ ಮೌಲಿ ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರೂ ಪತ್ನಿ ಕಂಡುಬಂದಿಲ್ಲ. ಆಕೆ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದರು.
ಜೂನ್ 8 ರಂದು ಆಸ್ಪತ್ರೆಯ ಸಿಬ್ಬಂದಿ ಎಂಟನೇ ಮಹಡಿಯಲ್ಲಿರುವ ಟವರ್ 3 ರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪತ್ತೆ ಮಾಡಿದ್ದರು. ಆ ಮೃತದೇಹ ನಾಪತ್ತೆಯಾಗಿದ್ದ ಮಹಿಳೆ ಸುಮಿತಾ ಅವರದೇ ಇರಬಹುದೆಂಬ ಶಂಕೆಯ ಮೇಲೆ ಅವರ ಪತಿ ಮೌಲ್ವಿಯನ್ನು ಸಂಪರ್ಕಿಸಿ ಮೃತದೇಹ ಗುರುತಿಸಲು ಕೇಳಿಕೊಳ್ಳಲಾಗಿದೆ.
ಕೊನೆಯ ಬಾರಿ ಪತ್ನಿ ನೋಡಿದಾಗ ಆಕೆ ತೊಟ್ಟುಕೊಂಡಿದ್ದ ಬಟ್ಟೆ ಮತ್ತು ಆಕೆಯ ಬಳಿಯಿದ್ದ ಸಣ್ಣ ಚೀಲವನ್ನು ಆಧರಿಸಿ ಮೌಲಿ ತನ್ನ ಪತ್ನಿಯದೇ ಮೃತದೇಹ ಎಂದು ದೃಢಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಯ ವಿವಿಧ ಕಡೆಗಳಿಂದ ಸಿಸಿಟಿವಿ ತುಣುಕುಗಳನ್ನು ಒಟ್ಟುಗೂಡಿಸಿ ಮೇ 23 ರಂದು ನಡೆದ ಸಂಗತಿಗಳನ್ನು ಒಟ್ಟುಗೂಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಗುತ್ತಿಗೆ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಧಿದೇವಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಸುಮಿತಾ ಬಳಿ ಸಣ್ಣ ಚೀಲದಲ್ಲಿದ್ದ ಹಣವನ್ನು ದೋಚುವ ಉದ್ದೇಶದಿಂದ ರಾಧಿದೇವಿ ಆಕೆಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಮೇ 22 ಮತ್ತು 23 ರ ರಾತ್ರಿ 12.30 ರ ಸುಮಾರಿಗೆ ಸುಮಿತಾ ಹಾಸಿಗೆ ಬಳಿಗೆ ಹೋದ ರಾಧಿದೇವಿ ವಾರ್ಡಿನಿಂದ ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಹೋಗಿ ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದು, ಜೂನ್ 8 ರಂದು ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದು, ವಿಚಾರಣೆ ಮುಂದುವರೆಸಲಾಗಿದೆ.