ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಸಂಬಂಧಿಸಿದಂತೆ ಗುಟ್ಟು ಬಿಟ್ಟುಕೊಡದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಿ ಎಸ್ ವೈ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿನ ಸಚಿವರ ಸಭೆಗೂ ಮುನ್ನ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ಆಗಮಿಸಿದ್ದು, ಪಕ್ಷ ಸಂಘಟನೆ, ಕೋವಿಡ್ ನಿರ್ವಹಣೆ ಕುರಿತು ಸಿಎಂ ಹಾಗೂ ಸಚಿವರ ಜೊತೆ ಸಭೆ ನಡೆಸಲಿದ್ದೇನೆ. ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಈಗಾಗಲೇ ನಾನು ಹೇಳಿಕೆ ನೀಡಿದ್ದು, ಪದೇ ಪದೇ ಸ್ಪಷ್ಟಪಡಿಸುವ ಅಗತ್ಯವಿಲ್ಲ ಎಂದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಬಿ ಎಸ್ ವೈ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಬಡವರಿಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.