ನವದೆಹಲಿ: ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಪ್ರಕರಣಗಳ ಬಳಿಕ ಇದೀಗ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಗ್ರೀನ್ ಫಂಗಸ್ ಎಂಬ ಮತ್ತೊಂದು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಿಸಿದೆ.
ದೇಶದಲ್ಲೇ ಮೊದಲ ಗ್ರೀನ್ ಫಂಗಸ್ ಪ್ರಕರಣ ಮಧ್ಯಪ್ರದೇಶದ ಇಂದೋರ್ ನಲ್ಲಿ ಪತ್ತೆಯಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖನಾದ 34 ವರ್ಷದ ವ್ಯಕ್ತಿಯಲ್ಲಿ ಈ ಹಸಿರು ಶಿಲೀಂದ್ರ ಸೋಂಕು ಪತ್ತೆಯಾಗಿದೆ. ಈ ಕುರಿತು ಅರಬಿಂದೋ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯ ಡಾ.ರವಿ ದೋಸಿ ತಿಳಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ವ್ಯಕ್ತಿ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರಬಹುದು ಎಂಬ ಶಂಕೆಯಿತ್ತು. ಆದರೆ ವೈದ್ಯಕೀಯ ಪರೀಕ್ಷೆ ಬಳಿಕ ಆತನ ಶ್ವಾಸಕೋಶ, ರಕ್ತ ಹಾಗೂ ಸೈನಸ್ ನಲ್ಲಿ ಗ್ರೀನ್ ಫಂಗಸ್ ಇರುವುದು ಪತ್ತೆಯಾಗಿದೆ. ಗ್ರೀನ್ ಫಂಗಸ್ ಅಪಾಯ, ವ್ಯಕ್ತಿಯ ದೇಹದಲ್ಲಿ ಯಾವ ರೀತಿ ವರ್ತಿಸುತ್ತೆ ಎಂಬಿತ್ಯಾದಿ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.