alex Certify BPL, ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL, ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ

ಧಾರವಾಡ: ಜಿಲ್ಲೆಯಲ್ಲಿರುವ ಆರ್ಥಿಕವಾಗಿ ಸಬಲರು ಮತ್ತು ಇತರ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಜೂನ್ 30 ಕೊನೆಯ ದಿನವಾಗಿದ್ದು, ಅನರ್ಹರು ಪಡೆದಿರುವ ಪಡಿತರ ಚೀಟಿಗಳನ್ನು ಹಿಂದುರಿಗಿಸದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಸಿದ್ದಾರೆ.

ಆರ್ಥಿಕ ಸಬಲರು, ಅನರ್ಹರು ಪಡಿತರ ಚೀಟಿಯನ್ನು ಆಹಾರ ಇಲಾಖೆಗೆ ಮರಳಿಸುವಂತೆ ಪದೇ ಪದೇ ಮನವಿ ಮಾಡಲಾಗಿದೆ. ಈ ಮನವಿಗೆ ಕೆಲವರು ಸ್ಪಂದಿಸಿ ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಹಿಂದುರುಗಿಸಿ ಆದ್ಯತೇತರ ಪಡಿತರ ಚೀಟಿ ಪಡೆದಿರುತ್ತಾರೆ.

ಉಳಿದ ಅನರ್ಹ ಬಿಪಿಎಲ್ ಕಾರ್ಡದಾರರು ಸರ್ಕಾರಕ್ಕೆ ತಮ್ಮ ಕಾರ್ಡ್ ಗಳನ್ನು ಹಿಂದುರುಗಿಸಲು ಜೂನ್ 30 ಅಂತಿಮ ದಿನಾಂಕವಾಗಿ ನಿಗದಿಗೊಳಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ನಿಯಮಗಳ ಪ್ರಕಾರ, ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು, ಮತ್ತು ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಅರ್ಹರಲ್ಲ.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ಯ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಹಾಗೂ ನಾಲ್ಕಕ್ಕಿಂತ ಹೆಚ್ಚಿಗೆ ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಮತ್ತು ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು, ಒಟ್ಟಾರೆಯಾಗಿ ಈ ನಾಲ್ಕು ವರ್ಗಗಳಿಗೆ ಸೇರುವ ಕುಟುಂಬಗಳು  ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಪಡೆಯಲು ಅರ್ಹರಿರುವುದಿಲ್ಲ.

ಆದ್ದರಿಂದ ಮತ್ತೊಮ್ಮೆ ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ(ಬಿಪಿಎಲ್) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ತಾಲ್ಲೂಕಿನ ತಹಶೀಲ್ದಾರ, ಸಹಾಯಕ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಧಾರವಾಡ ಮತ್ತು ಹುಬ್ಬಳ್ಳಿ ಕಚೇರಿಗಳಿಗೆ ಒಪ್ಪಿಸಿ ಆದ್ಯತೇತರ (ಎಪಿಎಲ್) ಪಡಿತರ ಚೀಟಿ ಪಡೆಯಲು ಕೋರಿದೆ.

ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977 ರ ಹಾಗೂ ಐ.ಪಿ.ಸಿ ಕಲಂಗಳಡಿಯಲ್ಲಿ ಕ್ರಮ ಜರುಗಿಲಾಗುವುದೆಂದು ಹಾಗೂ ಹಂಚಿಕೆ ಪಡೆದ ಆಹಾರಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...