ಬೆಂಗಳೂರು: ನಟ ಸಂಚಾರಿ ವಿಜಯ್ ಎರಡು ದಿನಗಳ ಜೀವನ್ಮರಣದ ಹೋರಾಟ ಅಂತ್ಯವಾಗಿದ್ದು, ಅವರ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಸಾವಿನಲ್ಲೂ ಸ್ಯಾಂಡಲ್ವುಡ್ ನಟ ವಿಜಯ್ ಸಂಚಾರಿ ಸಾರ್ಥಕತೆ ಮೆರೆದಿದ್ದು, ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಜೂನ್ 12 ರಂದು ರಾತ್ರಿ 11.45 ಬೆಂಗಳೂರಿನ ಜೆಪಿ ನಗರದ 7 ನೇ ಹಂತದಲ್ಲಿ ಸ್ನೇಹಿತ ನವೀನ್ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಪೊಲೊ ಆಸ್ಪತ್ರೆಯಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಹಸ್ತಾಂತರಿಸಲಿದ್ದಾರೆ. ಮರಣೊತ್ತರ ಪರೀಕ್ಷೆಗೆ ಮೊದಲು ಅಂಗಾಂಗ ಕಸಿ ನಡೆಯಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ನಂತರ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಜುಲೈ 18, 1983ರಲ್ಲಿ ಪಂಚನಹಳ್ಳಿಯಲ್ಲಿ ಜನಿಸಿದ್ದ ವಿಜಯ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ‘ನಾತಿಚರಾಮಿ’, ‘ಕಿಲ್ಲಿಂಗ್ ವೀರಪ್ಪನ್’, ‘ಆಕ್ಟ್ 1978’, ‘ನಾನು ಅವನಲ್ಲ ಅವಳು’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.