ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೊಡುಗೆ ಎಂಬಂತೆ ಮೂವತ್ತೆರಡು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ 32 ಕಾನಿರ್ವಲ್ ಕಾರುಗಳನ್ನ ಖರೀದಿ ಮಾಡಿದ್ದಾರೆ. ಪ್ರತಿ ಕಾರಿನ ಬೆಲೆ 25-30 ಲಕ್ಷ ರೂಪಾಯಿ ಎಂಬಂತೆ ಒಟ್ಟು 11 ಕೋಟಿಗೂ ಅಧಿಕ ರೂಪಾಯಿ ಖರ್ಚು ಮಾಡಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಂಕಷ್ಟವಿರುವ ಹಾಗೂ ಈಗಾಗಲೇ 40ಸಾವಿರ ಕೋಟಿ ಸಾಲ ಸರ್ಕಾರದ ತಲೆ ಮೇಲಿರುವಾಗ ಈ ಸಂದರ್ಭದಲ್ಲಿ ಈ ವ್ಯರ್ಥ ಖರ್ಚಿನ ಅವಶ್ಯಕತೆ ಇತ್ತೇ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಭಾನುವಾರ ತೆಲಂಗಾಣ ಸಾರಿಗೆ ಸಚಿವ ಪುವವಾಡ ಅಜಯ್ ಕುಮಾರ್, ರಾಜ್ಯ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಹೈದರಾಬಾದ್ನ ಸಿಎಂ ನಿವಾಸವಾದ ಪ್ರಗತಿ ಭವನದಲ್ಲಿ ಕಾರುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ತೆಲಂಗಾಣ ಸರ್ಕಾರದ ಈ ನಡೆಯನ್ನ ಬಿಜೆಪಿ ಅನವಶ್ಯಕ ಖರ್ಚು ಎಂದು ಹೇಳಿದೆ. ಈ ವಿಚಾರವಾಗಿ ಮಾತನಾಡಿದ ಬಿಜೆಪಿ ವಕ್ತಾರ ಕೃಷ್ಣ ಸಾಗರ್, 32 ಐಷಾರಾಮಿ ಕಾರುಗಳಿಗೆ 11 ಕೋಟಿ ರೂಪಾಯಿ ಖರ್ಚು ಮಾಡಿರುವ ಚಂದ್ರಶೇಖರ ರಾವ್ ತಮ್ಮ ಈ ನಡೆಯನ್ನ ಹೇಗೆ ಸಮರ್ಥಿಸಿಕೊಳ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಚಂದ್ರಶೇಖರ ರಾವ್ ಸಾರ್ವಜನಿಕ ಹಣವನ್ನ ಪೋಲು ಮಾಡಿದ್ದಾರೆ. ಕೊರೊನಾ ಚಿಕಿತ್ಸೆ ಭರಿಸಲಾಗದೇ ಜನರು ಕಷ್ಟ ಪಡುತ್ತಿದ್ದರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಭಯಾನಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್ ವಕ್ತಾರ ಡಿ. ಶ್ರವಣ್ ಕುಮಾರ್ ಇದು ತೆಲಂಗಾಣ ಸರ್ಕಾರದ ದುಸ್ಸಾಹಸ ಎಂದು ಜರಿದಿದ್ದಾರೆ.