ಕಡಿಮೆ ಜನಸಂಖ್ಯೆಯಿಂದ ಕಂಗೆಟ್ಟಿರುವ ಉತ್ತರ ಕ್ರೋಯೇಷಿಯಾದ ಪಟ್ಟಣವೊಂದು ಹೊಸ ನಿವಾಸಿಗಳನ್ನ ಆಕರ್ಷಿಸುವ ಸಲುವಾಗಿ ಇಲ್ಲಿರುವ ಖಾಲಿ ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಈ ಕಡಿಮೆ ದರಕ್ಕೆ ಮನೆಯನ್ನ ಕೆಲ ಬಲವಾದ ಷರತ್ತುಗಳ ಮೇಲೆ ನೀಡಲಾಗುತ್ತಿದೆ.
ಲೆಗ್ರಾಡ್ ಎಂಬ ಪಟ್ಟಣ ಒಂದು ಕಾಲದಲ್ಲಿ ಕ್ರೋಯೆಷಿಯಾದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಪಟ್ಟಣವಾಗಿತ್ತು. ಆದರೆ ಶತಮಾನಗಳ ಹಿಂದೆ ಆಸ್ಟ್ರೋ – ಹಂಗೇರಿಯನ್ ಸಾಮ್ರಾಜ್ಯದ ವಿಭಜನೆ ಬಳಿಕ ಇಲ್ಲಿ ಜನಸಂಖ್ಯೆ ಕುಸಿತವಾಗಿದೆ.
ಈ ಪಟ್ಟಣದಲ್ಲಿ ಪ್ರಸ್ತುತ ಜನಸಂಖ್ಯೆಯು 2250 ಆಗಿದೆ. 70 ವರ್ಷಗಳ ಹಿಂದಿನ ಜನಸಂಖ್ಯೆಗೆ ಹೋಲಿಸಿದ್ರೆ ಇದು ಅರ್ಧದಷ್ಟು ಕಡಿಮೆಯಾಗಿದೆ.
ಜನಸಂಖ್ಯೆ ತೀವ್ರಗತಿಯಲ್ಲಿ ಇಳಿಕೆ ಕಂಡ ಬಳಿಕ ಈ ಪಟ್ಟಣದಲ್ಲಿ 19 ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಇಲ್ಲಿನ ಮೇಯರ್ ಇವಾನ್ ಸಬೊಲಿಕ್ ಮಾಹಿತಿ ನೀಡಿದ್ದಾರೆ.
ಈ ರೀತಿ ಮನೆಯನ್ನ ಅತೀ ಕಡಿಮೆ ದರಕ್ಕೆ ನೀಡುವ ಮೂಲಕ ಪಟ್ಟಣದಲ್ಲಿ ಜನಸಂಖ್ಯೆಯನ್ನ ಹೆಚ್ಚಿಸೋದು ಅಧಿಕಾರಿಗಳ ಗುರಿಯಾಗಿದೆ. ಇಲ್ಲಿನ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಈಗಾಗಲೇ 17 ಮನೆಗಳು ಮಾರಾಟವಾಗಿದೆಯಂತೆ.
ಆದರೆ ಆಕರ್ಷಕ ಆಫರ್ಗಳ ಜೊತೆಯಲ್ಲಿ ಕೆಲ ಷರತ್ತುಗಳನ್ನ ವಿಧಿಸಲಾಗಿದೆ. ಕೆಲ ಮನೆಗಳು ಭಾಗಶಃ ಹಾನಿಗೊಳಗಾಗಿದ್ದರೆ ಕೆಲ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಹಲವು ಮನೆಗಳಲ್ಲಿ ಬಾಗಿಲುಗಳೇ ಇಲ್ಲ. ಇನ್ನು ಕೆಲ ಮನೆಗಳಲ್ಲಿ ಕಿಟಕಿಯೇ ಇಲ್ಲ. ಆದರೆ ಈ ಮನೆಗಳ ನವೀಕರಣಕ್ಕೂ ಪುರಸಭೆ ಆರ್ಥಿಕ ಸಹಾಯ ಮಾಡೋದಾಗಿ ಹೇಳಿದೆ.
ಆದರೆ ಆಸ್ತಿಯನ್ನ ಖರೀದಿಸಲು ಇಚ್ಛಿಸುವವರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಿರಬೇಕು. ಹಾಗೂ ಕನಿಷ್ಟ 15 ವರ್ಷಗಳ ಕಾಲ ಕಡ್ಡಾಯವಾಗಿ ಪಟ್ಟಣದಲ್ಲಿ ಇರಬೇಕು. ಪುರಸಭೆಯು ಈ ರೀತಿಯ ಜಾಹಿರಾತನ್ನ ನೀಡಿದ ಬಳಿಕ ರಷ್ಯಾ, ಉಕ್ರೇನ್, ಟರ್ಕಿ, ಅರ್ಜೆಂಟೀನಾ ಹಾಗೂ ಕೊಲಂಬಿಯಾಗಳಿಂದ ಗ್ರಾಹಕರು ಆಸ್ತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೇಯರ್ ಹೇಳಿದ್ದಾರೆ.