ಕ್ಯಾಲಿಫೋರ್ನಿಯಾದ ಮೀಡೋ ವಿಸ್ಟಾದಲ್ಲಿ ದಂಪತಿ ವಾಸವಿದ್ದ ಮನೆಗೆ ನುಗ್ಗಿದ ದರೋಡಕೋರ ಸ್ನಾನ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ.
ಸ್ನಾನ ಗೃಹದಿಂದ ಟವೆಲ್ ಹೊದ್ದು ಹೊರಬರುತ್ತಿದ್ದಂತೆಯೇ ಮನೆ ಮಾಲೀಕನಿಗೆ ಮುಖಾಮುಖಿಯಾಗಿದ್ದಾನೆ. ಮನೆ ಮಾಲೀಕನಾದ ಸ್ಟೀವ್ ಬೌರ್ರ ಪತ್ನಿ ರಾತ್ರಿ 11 ಗಂಟೆ ಸುಮಾರಿಗೆ ಪತಿಯನ್ನ ಎಬ್ಬಿಸಿ ಸ್ನಾನ ಗೃಹದಲ್ಲಿ ನೀರಿನ ಶಬ್ದ ಕೇಳಿ ಬರ್ತಿದೆ ಎಂದು ಹೇಳಿದ್ದರು.
ವರದಿಗಳ ಪ್ರಕಾರ, ಬೌರ್ ಕೈಯಲ್ಲಿ ಗನ್ನ್ನು ಹಿಡಿದ ಸ್ನಾನ ಗೃಹದಲ್ಲಿ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ತೆರಳಿದ್ದಾರೆ. ಈ ವೇಳೆ ಟವಲ್ ಹೊದ್ದಿದ್ದ ಕಳ್ಳ ಸ್ನಾನ ಗೃಹದಿಂದ ಸ್ನಾನ ಮುಗಿಸಿ ಹೊರಬಂದಿದ್ದಾನೆ.
ಗಾಜಿನ ಬಾಗಿಲನ್ನ ಸಿಮೆಂಟ್ನಿಂದ ಮಾಡಲಾದ ಮೊಲದ ಆಕೃತಿಯ ಗೊಂಬೆಯ ಸಹಾಯದಿಂದ ಒಡೆದು ಈತ ಮನೆ ಒಳಕ್ಕೆ ನುಗ್ಗಿದ್ದ ಎನ್ನಲಾಗಿದೆ. ಈ ವೇಳೆಯಲ್ಲಿ ಬೌರ್ ಪತ್ನಿ ಟಿವಿ ವೀಕ್ಷಿಸುತ್ತಿದ್ದರಂತೆ.
ನನ್ನ ಪತ್ನಿ ನನ್ನ ಎಬ್ಬಿಸಿ ಗನ್ನ್ನು ತೆಗೆದುಕೊಳ್ಳಿ. ಮೇಲಿನ ಮಹಡಿಯಲ್ಲಿ ಯಾರೋ ಇದ್ದಾರೆ ಎಂದು ಹೇಳಿದಳು. ನಾನು ಕೂಡಲೇ ಗನ್ನ್ನು ತೆಗೆದುಕೊಂಡೆ. ಕೂಡಲೇ ಮೇಲಕ್ಕೆ ಹೋದೆ. ನಾನು ಮೆಟ್ಟಿಲನ್ನ ಹತ್ತುತ್ತಿದ್ದ ವೇಳೆಯೇ ಈತ ಸ್ನಾನ ಮುಗಿಸಿ ಟವೆಲ್ ಸುತ್ತಿಕೊಂಡು ಕೆಳಕ್ಕೆ ಇಳಿಯುತ್ತಿದ್ದ ಎಂದು ಬೌರ್ ಹೇಳಿದ್ದಾರೆ.
ಸುಮಾರು 25 ವರ್ಷ ಪ್ರಾಯದ ಕಳ್ಳನನ್ನ ಪೊಲೀಸರು ಬಂಧಿಸಿದ್ದು ಈತನ ವಿರುದ್ಧ ಕಳ್ಳತನದ ಪ್ರಕರಣವನ್ನ ದಾಖಲಿಸಲಾಗಿದೆ.