ಚೀನಾ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಇದು ಕೊರೋನಾ ವೈರಸ್ ಗೆ ಇನ್ನೂ ಹತ್ತಿರವಿರುವ ತಳಿಯಲ್ಲಿ ಎರಡನೆಯದು ಎಂದು ಹೊಸ ವೈರಸ್ ಅನ್ನು ಗುರುತಿಸಲಾಗಿದೆ.
ಸೆಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿಯನ್ವಯ ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಸಂಶೋಧಕರು ಅರಣ್ಯ ಪ್ರದೇಶದ ವಿವಿಧ ಬಾವಲಿ ಪ್ರಭೇದಗಳಿಂದ ಕೊರೋನಾ 24 ನೋವೆಲ್ ಕೊರೋನಾ ವೈರಸ್ ಜೀನೋಮ್ ಗಳನ್ನು ಗಮನಿಸಿದ್ದಾರೆ.
ಮೇ 2019 ರಿಂದ ನವೆಂಬರ್ 2020 ರ ನಡುವೆ ಅರಣ್ಯ ಪ್ರದೇಶದಲ್ಲಿನ ಸಣ್ಣ ಬಾವಲಿಗಳಿಂದ ಈ ಮಾದರಿ ಸಂಗ್ರಹಿಸಲಾಗಿದೆ. ಬಾವಲಿಗಳ ಮಲ, ಮೂತ್ರ, ಸ್ವ್ಯಾಬ್ಗಳನ್ನು ಪರೀಕ್ಷಿಸಿದ ಸಂಶೋಧಕರು ಮತ್ತೊಂದು ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ.
ಕೊರೋನಾ ಸೋಂಕಿನ ಮೂಲದ ಬಗ್ಗೆ ಪುರಾವೆ ಆಧಾರಿತ ಅಧ್ಯಯನ, ತನಿಖೆ ಹೆಚ್ಚಾಗುತ್ತಿರುವುದರ ನಡುವೆಯೇ ಚೀನಾದ ಸಂಶೋಧಕರಿಂದ ಇಂತಹುದೊಂದು ವರದಿ ಬಂದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಚೀನಾದ ವುಹಾನ್ ನಗರದಲ್ಲಿ ಕೊರೋನಾ ವೈರಸ್ ಮೊದಲ ಪ್ರಕರಣ ವರದಿಯಾಗಿತ್ತು. ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಈ ವೈರಸ್ ಸೋರಿಕೆಯಾಗಿದೆ ಎಂದು ಚೀನಾ ವಿರುದ್ಧವೇ ಬೆರಳು ತೋರಿಸಲಾಗ್ತಿದೆ.
ಆದರೆ, ಚೀನಾದ ಉನ್ನತ ರಾಜತಾಂತ್ರಿಕರೊಬ್ಬರು ಇದನ್ನು ತಿರಸ್ಕರಿಸಿದ್ದಾರೆ. ವುಹಾನ್ ಲ್ಯಾಬ್ ನಿಂದ ವೈರಸ್ ಸೋರಿಕೆಯಾಗಿದೆ ಎಂದು ಹೇಳುವುದು ಅಸಂಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು, ಚೀನಾ ವಿದೇಶಾಂಗ ಕಾರ್ಯದರ್ಶಿ ಯಾಂಗ್ ಜೀಚಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ, ವೈರಸ್ನ ಉಗಮದ ಬಗ್ಗೆ ತಿಳಿಯುವ ತನಿಖೆಗೆ ಸಹಕಾರ ಮತ್ತು ಪಾರದರ್ಶಕತೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ.