ದಾವಣಗೆರೆ: ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಮದುವೆಯಾಗಿದ್ದ ಯುವಕರು ಅಧಿಕಾರಿಗಳ ದಾಳಿ ವೇಳೆ ಪರಾರಿಯಾಗಿದ್ದಾರೆ.
ಇಬ್ಬರು ಅನಾಥ ಸೋದರಿಯರನ್ನು ಯುವಕರು ಮದುವೆಯಾದ ಘಟನೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ವರ್ಷದ ಹಿಂದೆ ತಂದೆ, ಐದು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದರು. ಕೊರೊನಾದಿಂದ ತಾಯಿಯನ್ನು ಕಳೆದುಕೊಂಡಿದ್ದ ಸೋದರಿಯರಲ್ಲಿ ಮೂರು ತಿಂಗಳ ಹಿಂದೆ ಓರ್ವ ಬಾಲಕಿಯ ಮದುವೆ ನಡೆದಿತ್ತು. ಮೂರು ದಿನಗಳ ಹಿಂದೆ ಮತ್ತೊಬ್ಬಳನ್ನು ಮದುವೆಯಾಗಿದ್ದರು.
ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ.
ಮದುವೆಯಾಗಿದ್ದ ಬಾಲಕಿಯರಿಬ್ಬರು, ಇಬ್ಬರು ಸೋದರಿಯರು, ಓರ್ವ ಸಹೋದರನನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದ್ದು, ಜಿಲ್ಲಾ ಬಾಲಕಿಯರ ಮಂದಿರದ ಸುಪರ್ದಿಗೆ ನೀಡಲಾಗಿದೆ. ಮದುವೆಯಾದವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.