ಭಾರತ ಸರ್ಕಾರದಿಂದ ಉತ್ತೇಜನ ಸಿಕ್ಕ ಬೆನ್ನಲ್ಲಿ ತನ್ನ ಪೂರೈಕೆ ಚೈನ್ ಅನ್ನು ಭಾರತಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವ ಆಪಲ್ ಇದುವರೆಗೂ 20,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ.
ಕೋವಿಡ್-19 ಸಾಂಕ್ರಮಿಕದ ಏಟು ಇಲ್ಲದೇ ಹೋಗಿದ್ದರೆ ಈ ವೇಳೆಗೆ ಇನ್ನಷ್ಟು ಉದ್ಯೋಗಗಳನ್ನು ತಂತ್ರಜ್ಞಾನ ಲೋಕದ ದಿಗ್ಗಜ ಕಂಪನಿ ಸೃಷ್ಟಿಸಿರುತ್ತಿತ್ತು ಎಂದು ತಜ್ಞರು ಹೇಳುತ್ತಾರೆ.
ಭಾರತದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ (ಪಿಎಲ್‌ಐ) ಅಡಿ ಸಬ್ಸಿಡಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಉತ್ಪಾದಕರಾದ ಫಾಕ್ಸ್‌ಕಾನ್, ವಿಸ್ತ್ರಾನ್ ಹಾಗೂ ಪೆಗಟ್ರಾನ್‌ಗಳು ನಿರ್ದಿಷ್ಟ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲು ಕಾತರರಾಗಿದ್ದವು. ಪಿಎಲ್‌ಐ ಅರ್ಜಿ ಸಲ್ಲಿಸಿದಾಗ ಮಾತು ಕೊಟ್ಟಂತೆ, ಮಾರ್ಚ್ 2022ರ ವೇಳೆಗೆ 23,000 ಉದ್ಯೋಗಗಳನ್ನು ಸೃಷ್ಟಿಸಲು ಫಾಕ್ಸ್‌ಕಾನ್ ಹಾಗೂ ವಿಸ್ತ್ರಾನ್ ಸನ್ನದ್ಧವಾಗಿವೆ.
ಭಾರತದಲ್ಲಿ ಆಪಲ್‌ನ ಪೂರೈಕೆದಾರರ ಸಂಖ್ಯೆಯು ಒಂಬತ್ತಕ್ಕೆ ಏರಿದೆ. 2018ರಲ್ಲಿ ಈ ಸಂಖ್ಯೆ ಆರರಷ್ಟಿತ್ತು. ಇನ್ನಷ್ಟು ಪೂರೈಕೆದಾರರು ತಮ್ಮ ಪೂರೈಕೆ ಕೊಂಡಿಗಳನ್ನು ಭಾರತಕ್ಕೆ ಸ್ಥಳಾಂತರಗೊಳಿಸಿದ ಬಳಿಕ ಆಪಲ್‌ನಲ್ಲಿ ಕೆಲಸ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.
ಇದೇ ವೇಳೆ, ಭಾರತದ ತನ್ನ ಗ್ರಾಹಕರಿಗೆಂದು ಬಿಡುಗಡೆ ಮಾಡಲಿರುವ ಐಫೋನ್ 12 ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್ ಅನ್ನು ಸ್ಥಳೀಯವಾಗಿ ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ಇದೇ ಮಾರ್ಚ್‌ನಲ್ಲಿ ಆಪಲ್ ತಿಳಿಸಿತ್ತು.
ಐಫೋನ್ ಎಸ್‌ಇ ಮೂಲಕ ಆಪಲ್ 2017ರಿಂದ ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಚರಣೆ ಆರಂಭಿಸಿದೆ. ಇದೀಗ ತನ್ನ ಫ್ಲಾಗ್‌ಶಿಪ್‌ನ ಅತ್ಯಂತ ಸುಧಾರಿತ ವರ್ಶನ್‌ಗಳಾದ ಎಕ್ಸ್‌ಆರ್, ಐಫೋನ್ 11 ಹಾಗೂ ಐಫೋನ್ 12ಗಳನ್ನು ಭಾರತದಲ್ಲೇ ಉತ್ಪಾದಿಸುತ್ತಿದೆ.
ಭಾರತದಲ್ಲಿ ಆಪಲ್‌ನ ಪೂರೈಕೆದಾರರು ತಮ್ಮ ಇಂಧನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಗಾಳಿ ಹಾಗೂ ಸೌರಶಕ್ತಿ ಬಳಸಿಕೊಳ್ಳುತ್ತಿದ್ದಾರೆ.