ನವದೆಹಲಿ: ಗಡ್ಡದಿಂದಲೂ ಕೊರೊನಾ ಸೋಂಕು ಹೆಚ್ಚಾಗಬಹುದೇ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ಗಡ್ಡವನ್ನು ಬೆಳೆಸುವುದು ಆರೋಗ್ಯಕರವೇ…? ನಿಮ್ಮ ಮುಖದ ಕೂದಲು ಅಂದಗೊಳಿಸುವ ಇತರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.
ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಪುರುಷರು ಗಡ್ಡ ಮತ್ತು ಉದ್ದನೆಯ ಕೂದಲು ಬೆಳೆಸಿರುತ್ತಾರೆ. ಕೆಲವರು ತಮ್ಮ ಹೊಸ ಕೇಶ ವಿನ್ಯಾಸವನ್ನು ಕಂಡು ಆನಂದಿಸುತ್ತಾರೆ. ಮತ್ತೆ ಕೆಲವರು ಅದರಿಂದ ತೊಂದರೆ ಅನುಭವಿಸುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗದ ವೇಳೆ ಕೂದಲು ಬೆಳೆಸುವುದು ನಿಜಕ್ಕೂ ಆರೋಗ್ಯಕರವೇ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಸದಸ್ಯ ಡಾ. ಆಂಥೋನಿ ಎಮ್. ರೋಸ್ಸಿ ಅವರು, ನೀವು ತುಂಬಾ ಪೊದೆ ಗಡ್ಡವನ್ನು ಹೊಂದಿದ್ದರೆ ಮಾಸ್ಕ್ ಸರಿಯಾಗಿ ಧರಿಸಲು ಸಾಧ್ಯವಾಗುವುದಿಲ್ಲ. ಉದ್ದನೆಯ ಗಡ್ಡ ಮಾಸ್ಕ್ ಧರಿಸುವ ಮುಖದ ಭಾಗವನ್ನು ಆವರಿಸುತ್ತದೆ. ನಿಮ್ಮ ದವಡೆ, ಕುತ್ತಿಗೆವರೆಗೂ ಗಡ್ಡವಿದ್ದರೆ ಮಾಸ್ಕ್ ಹಾಕಿಕೊಂಡರೂ ಬಾಯಿ, ಮೂಗಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದಾಗಿ ಕೊರೊನಾ ಕಣಗಳು ಮತ್ತು ಗಾಳಿ ಮಾಸ್ಕ್ ನಡುವೆ ಹೋಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ನೀವು ಉಸಿರಾಡಿದಾಗ, ಮಾತನಾಡುವಾಗ, ಕೆಮ್ಮುವ ಸಂದರ್ಭದಲ್ಲಿ, ವೈರಸ್ ಹನಿಗಳನ್ನು ನಿಮ್ಮ ಮಾಸ್ಕ್ ತಡೆಯಲು ಸಾಧ್ಯವಾಗದಿರಬಹುದು. ಮಾಸ್ಕ್ ಅಂಚುಗಳಿಂದ ಸೋಂಕು ನಿಮಗೆ ತಗುಲಬಹುದು. ಮಾಸ್ಕ್ ಸರಿಯಾಗಿ ಧರಿಸದೇ ವೈರಸ್ ಸಂಪರ್ಕಕ್ಕೆ ಬರಬಹುದು. ಉದ್ದವಾದ ಪೊದೆ ಗಡ್ಡವನ್ನು ಹೊಂದಿದ್ದರೆ ಮಾಸ್ಕ್ ತುದಿಯಲ್ಲಿ ವೈರಸ್ ಪ್ರವೇಶಿಸುವ ಸಾಧ್ಯತೆ ಇರುವುದಿರಂದ ನಿಮ್ಮ ಗಡ್ಡವನ್ನು ಟ್ರಿಮ್ ಮಾಡುವ ಅವಶ್ಯಕತೆಯಿದೆ.
ಬಿಯರ್ಡ್ ಸ್ಟೈಲಿಂಗ್
ಬಿಯರ್ಡ್ ಟ್ರಿಮ್ಮರ್ ಬಳಸಿ ಗಡ್ಡವನ್ನು ಸುಲಭವಾಗಿ ಟ್ರಿಮ್ ಮಾಡಬಹುದು. ಗಡ್ಡವನ್ನು ಟ್ರಿಮ್ ಮಾಡಿಕೊಂಡು ಸ್ಟೈಲ್ ಆಗಿ ಕಾಣಿಸಬಹುದು. ಗಡ್ಡವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮುಖದ ಕೂದಲನ್ನು ಅಚ್ಚುಕಟ್ಟಾಗಿಟ್ಟುಕೊಳ್ಳಲು ಉತ್ತಮವಾದ ಕತ್ತರಿ, ಟ್ರಿಮ್ಮರ್ ಬಳಸುವುದು ಮುಖ್ಯ. ಕ್ಲಿಪ್ಪರ್‌ಗಳು ಅಥವಾ ಬಹು ಉದ್ದದ ಸೆಟ್ಟಿಂಗ್‌ಗಳೊಂದಿಗೆ ಬರುವ ಟ್ರಿಮ್ಮರ್‌ಗಳ ಬಳಕೆಯಿಂದ ಗಡ್ಡವನ್ನು ನಿಖರವಾಗಿ ಟ್ರಿಮ್ ಮಾಡಿಕೊಳ್ಳಬಹುದು. ನೀವು ಕ್ಷೌರದ ಮೊದಲು ಗಡ್ಡದ ಆಕಾರವನ್ನು ನಿಮ್ಮ ಮುಖಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಿ. ಉದಾಹರಣೆಗೆ, ರೌಂಡ್ ಮುಖಗಳಿಗಾಗಿ, ತೆಳ್ಳನೆಯವರು ಪೂರ್ಣ ಗಡ್ಡವನ್ನು ಇಟ್ಟುಕೊಳ್ಳಬಹುದು. ಒಮ್ಮೆ ನೀವು ಗಡ್ಡವನ್ನು ಆಕಾರಕ್ಕೆ ತಕ್ಕಂತೆ ಕತ್ತರಿಸಿದ ನಂತರ, ನಿಮ್ಮ ಗಡ್ಡವನ್ನು ಮೃದುವಾಗಿ, ಆರೋಗ್ಯಕರವಾಗಿಸಲು ಗಡ್ಡದ ಎಣ್ಣೆಯನ್ನು ಹಚ್ಚುವುದು ಒಳ್ಳೆಯದು.
ಮನೆಯಲ್ಲಿ ಮುಖ ಶುದ್ಧೀಕರಣ
ಬೇಸಿಗೆಯಲ್ಲಿ, ಹವಾಮಾನದ ಕಾರಣದಿಂದಾಗಿ, ಒಬ್ಬರು ಸಾಮಾನ್ಯಕ್ಕಿಂತ ಹೆಚ್ಚು ಬೆವರುತ್ತಾರೆ, ಇದು ಹೆಚ್ಚಾಗಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಬೆವರಿನೊಂದಿಗೆ ಕೊಳಕು ಮತ್ತು ಧೂಳು ಸೇರಿದಾಗ ಅಂಟಿಕೊಂಡು ಚರ್ಮಕ್ಕೆ ಹಾನಿಯಾಗಬಹುದು. ಗುಳ್ಳೆಗಳು ಬರಬಹುದು. ಇವುಗಳನ್ನು ನಿವಾರಿಸಲು ಫೇಸ್ ವಾಶ್ ಬಳಸಿರಿ. ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ತೊಳೆಯಿರಿ. ಫೇಸ್ ಕ್ಲೆನ್ಸರ್ ನಂತಹ ಸಾಧನಗಳನ್ನು ಚರ್ಮದ ಕಲ್ಮಶಗಳನ್ನು ತೆಗೆದುಹಾಕಲು ಬಳಸಬಹುದು.
ಕೂದಲ ರಕ್ಷಣೆ
ನೀವು ಸಲೂನ್ ಗಳಿಗೆ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿ ನಿಮ್ಮ ಕೂದಲಿಗೆ ಆರೈಕೆ ಮಾಡುವ ಅವಶ್ಯಕತೆಯಿದೆ, ಹೇರ್ ಸ್ಪಾದಿಂದ ಕೂದಲ ರಕ್ಷಣೆ ಮಾಡುವುದು ಒಳ್ಳೆಯದು. ಹಾಗೆ ಮಾಡಲು, ಮೊದಲು ನಿಮ್ಮ ಕೂದಲಿಗೆ ಎಣ್ಣೆ ಹಾಕಿ. ಅದು 20 ನಿಮಿಷಗಳ ಕಾಲ ಇರಲಿ. ನಂತರ, ಒಂದು ಟವೆಲ್ ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಅದ್ದಿ. ಈಗ, ನಿಮ್ಮ ಕೂದಲಿನ ಸುತ್ತಲೂ ಟವೆಲ್ ಅನ್ನು ಕಟ್ಟಿಕೊಳ್ಳಿ. ಇದರಿಂದ ನಿಮ್ಮ ನೆತ್ತಿಯೊಳಗೆ ಆಳವಾಗಿ ತೈಲ ಸೇರಲು ಹಬೆ ಸಹಾಯ ಮಾಡುತ್ತದೆ. ನಂತರದಲ್ಲಿ ಉತ್ತಮ ಗುಣಮಟ್ಟದ ಶಾಂಪೂ ಮತ್ತು ಕಂಡಿಷನರ್ ಬಳಸಿ ನಿಮ್ಮ ಕೂದಲನ್ನು ತೊಳೆಯುವುದು ಒಳ್ಳೆಯದು.