ಕೊಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ. 2017 ರಲ್ಲಿ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮುಕುಲ್ ರಾಯ್ ನಂತರದಲ್ಲಿ ಹಲವು ಪ್ರಮುಖ ನಾಯಕರು ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿಗೆ ಸೇರ್ಪಡೆಯಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಟಿಎಮಸಿಗೆ ಹಿನ್ನಡೆಯಾಗಬಹುದೆಂದು ಹೇಳಲಾಗಿತ್ತು. ಆದರೆ, ಭಾರಿ ಬಹುಮತದೊಂದಿಗೆ ಟಿಎಂಸಿ ಅಧಿಕಾರಕ್ಕೆ ಬಂದಿದೆ. ಇದಾದ ನಂತರ ಅನೇಕರು ಟಿಎಂಸಿಗೆ ಮರಳುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಘರ್ ವಾಪಸಿ ಕುರಿತಾಗಿ ಭಾರೀ ಚರ್ಚೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮುಕುಲ್ ರಾಯ್ ಮತ್ತು ಅವರ ಪುತ್ರನೊಂದಿಗೆ ಬಿಜೆಪಿ ತೊರೆದು ಮತ್ತೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದವರನ್ನು ಯಾವುದೇ ಕಾರಣಕ್ಕೂ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.