ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಜೂನ್ 14 ರಿಂದ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಆದೇಶ ಮುಂದುವರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಉಸ್ತುವಾರಿ ಸಚಿವರ ಜೊತೆಗಿನ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಲಾಕ್ಡೌನ್ ಆದೇಶದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಹೇಳಿದ್ದಾರೆ. ಈ ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ 19 ಜಿಲ್ಲೆಗಳಲ್ಲಿ ಜೂನ್ 14 ರ ಬೆಳಗ್ಗೆ 6 ಗಂಟೆಯ ಬಳಿಕ ಲಾಕ್ಡೌನ್ ಸಡಿಲಿಕೆ ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಜೂನ್ 21ರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿ ಇರಲಿದೆ.
ಜಿಲ್ಲಾವಾರು ಲಾಕ್ಡೌನ್ ಆದೇಶದ ವಿಚಾರವಾಗಿ ಹೊರಡಿಸಲಾದ ಮಾರ್ಗಸೂಚಿಗಳ ಬಗ್ಗೆಯೂ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ ಈಗಾಗಲೇ ಇರುವ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರ ಜೊತೆ ಸಮಾಲೋಚಿಸಿ ಹೆಚ್ಚಿನ ಕ್ರಮ ಕೈಗೊಳ್ಳಬಹುದು.
ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕಾರ್ಖಾನೆಗಳಲ್ಲಿ 50 ಪ್ರತಿಶತ ಸಿಬ್ಬಂದಿ ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗುವುದು. ಗಾರ್ಮೆಂಟ್ಗಳಿಗೆ 30 ಪ್ರತಿಶತ ಸಿಬ್ಬಂದಿ ಹಾಜರಾತಿಗೆ ಅವಕಾಶ ನೀಡಲಾಗಿದೆ. ಅಗತ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗುವುದು.
ನಿರ್ಮಾಣ ಕಾಮಗಾರಿಗೆ ಅವಕಾಶ ಹಾಗೂ ಅದಕ್ಕೆ ಸಂಬಂಧಿಸಿದ ಅಂಗಡಿಗಳಾದ ಸ್ಟೀಲ್ ಹಾಗೂ ಸಿಮೆಂಟ್ ವ್ಯಾಪಾರ ಮಳಿಗೆಗಳನ್ನ ತೆರೆಯಬಹುದು.
ಹಿರಿಯ ನಾಗರಿಕರು ವಾಕಿಂಗ್ ಮಾಡಲು ಅವಕಾಶವಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಕೂರಬಹುದು. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಅವಕಾಶ ಇರೋದಿಲ್ಲ. ಹಾಗೂ ಅಂತರ್ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರೋದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.