ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಭಯವಿದೆ. ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ದೇಶ ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿ ರೆಮ್ಡೆಸಿವಿರನ್ನು ಶಿಫಾರಸು ಮಾಡಲಾಗಿಲ್ಲ. ಎಚ್ಆರ್ಸಿಟಿ ಇಮೇಜಿಂಗ್ನ ತರ್ಕಬದ್ಧ ಬಳಕೆಗೆ ಒಪ್ಪಿಗೆ ನೀಡಲಾಗಿದೆ.
ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಸ್ಟೀರಾಯ್ಡ್ ಗಳ ಬಳಕೆ ಹಾನಿಕಾರಕವೆಂದು ಹೇಳಲಾಗಿದೆ. ಆಸ್ಪತ್ರೆಗೆ ದಾಖಲಾದ ಮಧ್ಯಮ ಹಾಗೂ ಗಂಭೀರ ರೋಗಿಗಳಿಗೆ ಮಾತ್ರ ಸ್ಟಿರಾಯ್ಡ್ ಬಳಸುವಂತೆ ಸೂಚನೆ ನೀಡಲಾಗಿದೆ. ಸ್ಟಿರಾಯ್ಡ್ ಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಯಲ್ಲಿ ಬಳಸಬೇಕೆಂದು ಡಿಜಿಹೆಚ್ಎಸ್ ಹೇಳಿದೆ.
ಮಕ್ಕಳಿಗೆ ಚಿಕಿತ್ಸೆ ನೀಡಲು ಆಂಟಿವೈರಲ್ ಡ್ರಗ್ ರಿಮೆಡೆಸಿವಿರ್ ಶಿಫಾರಸು ಮಾಡುವುದಿಲ್ಲ ಎಂದು ಮಾರ್ಗಸೂಚಿಗಳು ಹೇಳುತ್ತವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರಿಮೆಡೆಸಿವಿರ್ ಗೆ ಸಂಬಂಧಿಸಿದಂತೆ ಸಾಕಷ್ಟು ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾಹಿತಿಯ ಕೊರತೆಯಿದೆ ಎಂದು ಮಾರ್ಗಸೂಚಿಗಳು ಹೇಳುತ್ತವೆ.
ರೋಗಿಗಳ ಶ್ವಾಸಕೋಶದ ಸ್ಥಿತಿ ತಿಳಿಯಲು ಹೈ-ರೆಸಲ್ಯೂಷನ್ ಸಿಟಿಯ ತರ್ಕಬದ್ಧ ಬಳಕೆಯನ್ನು ಶಿಫಾರಸ್ಸು ಮಾಡಲಾಗಿದೆ. ರೋಗಲಕ್ಷಣವಿಲ್ಲದ ಹಾಗೂ ಸೌಮ್ಯ ಲಕ್ಷಣವಿರುವ, ಮನೆಯಲ್ಲಿರುವ ಮಕ್ಕಳಿಗೆ ಮಾರ್ಗಸೂಚಿಯಲ್ಲಿ ಯಾವುದೇ ಔಷಧಿಯನ್ನು ಶಿಫಾರಸ್ಸು ಮಾಡುವುದಿಲ್ಲ.
ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಜೊತೆ ಪೌಷ್ಠಿಕ ಆಹಾರವನ್ನು ಸೂಚಿಸಲಾಗಿದೆ. ಪ್ರತಿ ನಾಲ್ಕರಿಂದ 6 ಗಂಟೆಗೊಮ್ಮೆ 10-15 ಮಿಲಿಗ್ರಾಂ ಪ್ಯಾರೆಸಿಟಮಲ್ ನೀಡಬಹುದು. ವಯಸ್ಕರಲ್ಲಿ ಕೆಮ್ಮು ಕಾಣಿಸಿಕೊಂಡರೆ ಬೆಚ್ಚಗಿನ ಉಪ್ಪು ನೀರಿನಲ್ಲಿ ಗಾರ್ಗಲ್ ಮಾಡುವಂತೆ ಸೂಚನೆ ನೀಡಲಾಗಿದೆ. ಮಧ್ಯಮ ಸೋಂಕಿತರಿಗೆ ಆಕ್ಸಿಜನ್ ಚಿಕಿತ್ಸೆಯನ್ನು ತಕ್ಷಣ ನೀಡುವಂತೆ ಸೂಚಿಸಲಾಗಿದೆ.
ಪೋಷಕರ ಮೇಲ್ವಿಚಾರಣೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರು ನಿಮಿಷಗಳ ನಡಿಗೆ ಪರೀಕ್ಷೆಯನ್ನು ಸಹ ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.