ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಒಂದೂವರೆ ತಿಂಗಳಿಂದ ಮನೆಯಲ್ಲೇ ಬಂಧಿಯಾದಂತಾಗಿದ್ದ ಜನರಿಗೆ ಬಿಡುಗಡೆ ಸಿಗಲಿದೆ.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಪ್ರಸ್ತುತ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ ಡೌನ್ ಜೂನ್ 14ಕ್ಕೆ ಮುಗಿಯಲಿದ್ದು, ಜೂನ್ 14ರ ಬಳಿಕ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಕುರಿತು ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಆಕ್ಸಿಜನ್ ಪೂರೈಕೆ ಕಡಿತ ಅಣಕು ಕಾರ್ಯಾಚರಣೆ; 22 ರೋಗಿಗಳ ಸಾವು ಎಂದಿದ್ದ ಪಾರಸ್ ಆಸ್ಪತ್ರೆ ಸೀಜ್
ಇನ್ನು ರಾಜ್ಯದಲ್ಲಿ ಮೂರು ಹಂತಗಳಲ್ಲಿ ಅನ್ ಲಾಕ್ ಮಾಡಲು ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆ ಇರುವ ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಅನ್ ಲಾಕ್ ಆರಂಭವಾಗಲಿದೆ. ಎರಡನೇ ಹಂತದಲ್ಲಿ ಬಹುತೇಕ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವ ಸಾಧ್ಯತೆಯಿದ್ದು, ಮೂರನೇ ಹಂತದಲ್ಲಿ ಔಟ್ ಡೋರ್ ಚಟುವಟಿಕೆ, ಮಾರುಕಟ್ಟೆ, ಜಿಮ್, ಥಿಯೇಟರ್ ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.