ಕ್ರೆಡಿಟ್ ಕಾರ್ಡ್ ಜಾರಿಗೆ ಬಂದ ಆರಂಭದ ದಿನಗಳಲ್ಲಿ ಜನರಿಗೆ ಇದ್ರ ಬಗ್ಗೆ ಅನುಮಾನಗಳಿದ್ದವು. ನಂತ್ರ ಜನರು ಬುದ್ದಿವಂತಿಕೆಯಿಂದ ಅದರ ಬಳಕೆ ಶುರು ಮಾಡಿದ್ದರು. ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಗ್ರಾಹಕರ ಅನುಕೂಲಕ್ಕೆ ಹೆಚ್ಚುವರಿ ಸೌಲಭ್ಯ ನೀಡಲಾಗ್ತಿದೆ.
ಹಲವಾರು ಹಣಕಾಸು ಕಂಪನಿಗಳು ಮತ್ತು ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ `ಈಗ ಖರೀದಿಸಿ ಮತ್ತು ನಂತರ ಪಾವತಿಸಿ’ ಯೋಜನೆಯನ್ನು ಪರಿಚಯಿಸಿವೆ. ಈ ಬಿಎನ್‌ಪಿಎಲ್ ಸೇವೆ ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ನೆರವಾಗಿದೆ. ಜನರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಈ ವೇಳೆ ಬಿಎನ್‌ಪಿಎಲ್ ಯೋಜನೆಗಳು ಜನರ ಗಮನ ಸೆಳೆದಿವೆ.
ಈ ಯೋಜನೆಗಳು ಗ್ರಾಹಕರಿಗೆ ಉತ್ಪನ್ನವನ್ನು ಖರೀದಿಸಲು ಮತ್ತು ನಿಗದಿತ ಅವಧಿಯ ಅಂತ್ಯದ ವೇಳೆಗೆ ಪಾವತಿ ಮಾಡಲು ಅವಕಾಶ ನೀಡುತ್ತವೆ. ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ವಿಫಲವಾದರೆ, ಬಿಲ್ ಮೊತ್ತದ ಆಧಾರದ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಅಮೆಜಾನ್ ಪೇ, ಜೆಸ್ಟ್ ಮನಿ, ಲೇಜಿಪೇ, ಸಿಂಪ್ಲ್ ಮತ್ತು ಸ್ಲೈಸ್ ಕಂಪನಿಗಳು ಬಿಎನ್‌ಪಿಎಲ್ ಸೇವೆಗಳನ್ನು ಒದಗಿಸುತ್ತವೆ.
ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ಆದ್ರೆ ತಿಂಗಳ ಮಧ್ಯದಲ್ಲಿ ಖರೀದಿ ಮಾಡಲು ಬಯಸುವವರಿಗೆ ಯೋಜನೆ ಪ್ರಯೋಜನಕಾರಿಯಾಗಲಿದೆ. ಕ್ರೆಡಿಟ್ ಕಾರ್ಡ್‌ಗಳಿಗೆ ಪರ್ಯಾಯವಾಗಿ, ಈ ಯೋಜನೆಗಳು ಪಾವತಿಗಳಲ್ಲಿ ಅಲ್ಪಾವಧಿಯ ವಿಸ್ತರಣೆಯನ್ನು ನೀಡುತ್ತವೆ.
ನಿಗದಿತ ಸಮಯಕ್ಕೆ ಹಣ ಪಾವತಿ ಮಾಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಕೆಲ ಕಂಪನಿಗಳು ಪ್ರತಿ ದಿನದ ಲೆಕ್ಕದಲ್ಲಿ ಬಡ್ಡಿ ವಿಧಿಸುತ್ತವೆ. ಆಗ ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಡೀಫಾಲ್ಟ್ ಮಾಡುವುದು ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮುಂದಿನ ದಿನಗಳಲ್ಲಿ ಸಾಲಕ್ಕೆ ಸಮಸ್ಯೆಯಾಗಬಹುದು.