‘ಬಿಜೆಪಿಗೆ ಯಡಿಯೂರಪ್ಪ ಬೇಡವಾದ ಕೂಸಾಗಿದ್ದಾರೆ. ಅವರನ್ನು ಕಿತ್ತು ಹಾಕಲು ಹೈಕಮಾಂಡ್ ಸಿದ್ಧವಾಗಿದೆ. ರಾಜ್ಯ ಬಿಜೆಪಿ ನಾಯಕರು ಕೂಡ ಕೊಡವಿಕೊಳ್ಳಲು ಸಿದ್ದವಿದ್ದಾರೆ. ಯಡಿಯೂರಪ್ಪ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದು ಎಂಬ ಚಿಂತೆ ಅವರಿಗೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ. ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ.’
ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಬಗೆಬಗೆಯ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ಕೊಡುತ್ತೇನೆ ಎನ್ನುತ್ತಾರೆ. ಇನ್ನೊಂದು ಕಡೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ರಾಜ್ಯದ ಚಿಂತೆಯಿಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಈವರೆಗೆ ಸರಿಯಾಗಿ 1000 ಕೋಟಿ ರೂ. ಪರಿಹಾರ ನೀಡಿಲ್ಲ. ಕೇವಲ ತೋರಿಕೆಗಾಗಿ ಕೆಲವರಿಗೆ ಪರಿಹಾರ ನೀಡಲಾಗಿದೆ. ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10 ಕೆಜಿ ಅಕ್ಕಿ ಮತ್ತು 10 ಸಾವಿರ ರೂಪಾಯಿ ಪರಿಹಾರ ನೀಡಿದ್ದರೆ ನಿಜವಾದ ಪರಿಹಾರವಾಗುತ್ತಿತ್ತು. ರಾಜ್ಯದ ಜನರ ಹಿತ ಕಾಪಾಡಲು ವಿಫಲವಾಗಿರುವ ಯಡಿಯೂರಪ್ಪ ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ. ಆದರೆ ಪೂರ್ತಿ ಬಸ್ ಕೆಟ್ಟು ಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.