ಲಂಡನ್: ಲಿಂಗ ತಾರತಮ್ಯ, ಜನಾಂಗೀಯ ನಿಂದನೆ ಆರೋಪದ ಮೇಲೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತು ಮಾಡಲಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಒಲಿ ರಾಬಿನ್ಸನ್ ಅವರನ್ನು ಅಮಾನತು ಮಾಡಿದೆ. ನ್ಯೂಜಿಲೆಂಡ್ ಎದುರು ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಒಲಿ ರಾಬಿನ್ಸನ್ ಪಾದಾರ್ಪಣೆ ಮಾಡಿದ್ದರು. ಪಾದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ತಮ್ಮ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಸೇರಿದಂತೆ 7 ವಿಕೆಟ್ ಗಳಿಸಿದ್ದರು. ಮೊದಲ ಇನಿಂಗ್ಸ್ ನಲ್ಲಿ 42 ರನ್ ಗಳಿಸಿದ್ದರು.
ಅಂದ ಹಾಗೆ, ಒಲಿ ರಾಬಿನ್ಸನ್ 2012 -13 ರಲ್ಲಿ ಲಿಂಗ ತಾರತಮ್ಯ ಮತ್ತು ಜನಾಂಗೀಯ ನಿಂದನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಅವುಗಳು ಈಗ ವೈರಲ್ ಆಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.
ಮುಸ್ಲಿಮರನ್ನು ಭಯೋತ್ಪಾದಕರು ಎನ್ನುವಂತೆ ಬಿಂಬಿಸಿದ್ದರು. ಅಲ್ಲದೇ ಮಹಿಳೆಯರು ಮತ್ತು ಏಷ್ಯಾ ಜನರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದರು. ಟ್ವೀಟ್ ಈಗ ಹರಿದಾಡಿದ ಹಿನ್ನೆಲೆಯಲ್ಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ.
ರಾಷ್ಟ್ರೀಯ ತಂಡದ ಆಟಗಾರನಾಗಿರುವ ರಾಬಿನ್ಸನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯ ಇರುವುದಿಲ್ಲ ಎಂದು ಹೇಳಲಾಗಿದೆ.